ಜಿಲ್ಲೆ

ರಾಜ್ಯ ಬಜೆಟ್​ 2025: ಆರೋಗ್ಯ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಘೋಷಿಸಿದ ಕೊಡುಗೆಗಳು ಹೀಗಿವೆ.... State Budget 2025

State Budget 2025 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-2026ನೇ ಸಾಲಿನ ಆಯವ್ಯಯವನ್ನು ಮಂಡಿಸುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆಯನ್ನು ನೀಡಿದ್ದಾರೆ.

ತಾಯಿ ಮರಣ ಪ್ರಮಾಣ ಶೂನ್ಯಕ್ಕಿಳಿಸಲು 320 ಕೋಟಿ ಅನುದಾನ ಘೋಷಣೆ ಮಾಡಿದ್ದು, ಪ್ರಸೂತಿ ವೇಳೆ ತೀವ್ರ ರಕ್ತಸ್ರಾವ ಮತ್ತು ತಡೆಗಟ್ಟುವಿಕೆ ಚಿಕಿತ್ಸೆಗೆ ಅವಶ್ಯ ಉಪಕರಣ ಮತ್ತು ಹೊಸ ಡಿಜಿಟಲ್ ತಂತ್ರಜ್ಞಾನದ ಮೂಲಕ ಹೆರಿಗೆ ಸೇವೆ ಬಲವರ್ಧನೆ ಮಾಡುವುದಾಗಿ ಘೋಷಣೆ ಮಾಡಿದರು.

ಇನ್ನು ಗರ್ಭಿಣಿಯರ ರಕ್ತ ಹೀನತೆ ತಡೆಗೆ ಹಿಂದುಳಿದ ಜಿಲ್ಲೆಗಳಿಗೆ ಪೌಷ್ಠಿಕಾಂಶ ಕಿಟ್, ತಾಯಂದಿರಿಗೆ ವಾತ್ಸಲ್ಯ ಕಿಟ್ & ಪ್ರೋತ್ಸಾಹ ಧನ ವಿತರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಇದಿಷ್ಟೇ ಅಲ್ಲದೆ, ಪ್ರತಿ ಆಸ್ಪತ್ರೆಯಲ್ಲಿ ಎಂಸಿಹೆಚ್ ತಜ್ಞರ ನಿಯೋಜನೆ, ಬೆಂಗಳೂರು ಉತ್ತರ ತಾಲೂಕಲ್ಲಿ 150 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಾಣ, ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಹಾಗೂ ಚಿತ್ರದುರ್ಗದ ಮೊಳಕಾಲ್ಮೂರಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಣೆ ಮಾಡಿದರು.

ಸರ್ಕಾರಿ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಉಚಿತ ಆರೋಗ್ಯ ಸೇವೆಯನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ. 5 ಲಕ್ಷ ರೂ. ವೆಚ್ಚದವರೆಗಿನ ನಗದು ರಹಿತ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗುವುದು, ಮಹಿಳೆಯರ ಗರ್ಭ ಕಂಠ ಕ್ಯಾನ್ಸರ್ ತಡೆಗೆ HPV ಲಸಿಕೆ ಯೋಜನೆ ಜಾರಿಗೆ ತರುವುದಾಗಿ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ, ಆಶಾ ಕಾರ್ಯಕರ್ತೆಯರ ಆರೋಗ್ಯ ಧನವನ್ನು 1 ಸಾವಿರ ರೂ. ಹೆಚ್ಚಳ ಮಾಡಿದರು.