ಮೈಸೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ರಾಜ್ಯ ಬೋವಿ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಮಹದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯ ಭೋವಿ ಸಂಘರ್ಷ ಸಮಿತಿ ಉಪಾಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಿಂದ ಸಾಕಷ್ಟು ಸಮುದಾಯಗಳಿಗೆ ಅನ್ಯಾಯವಾಗಲಿದೆ. ಆಯೋಗದ ವರದಿಯ ಶಿಫಾರಸಿನ ಪ್ರಕಾರ 101 ಉಪ ಜಾತಿಗಳಲ್ಲಿ 99 ಉಪ ಜಾತಿಗಳಿಗೆ ಅನ್ಯಾಯವಾಗಲಿದೆ. ಶೇ.15 ಮೀಸಲಾತಿಯಲ್ಲಿ ಎಡಗೈಯವರಿಗೆ ಶೇ.6 ಹಾಗೂ ಬಲಗೈಯವರಿಗೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ಉಳಿದ ಶೇ.4 ಮೀಸಲಾತಿಯನ್ನು 99 ಉಪಜಾತಿಗಳು ಹಂಚಿಕೊಳ್ಳುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಆದರೆ, ಮೀಸಲಾತಿ ಸೌಲಭ್ಯವನ್ನು ಕೆಲವು ಬಲಾಢ್ಯ ಸಮುದಾಯದವರು ಕಬಳಿಸಿದ್ದಾರೆ. ಇದರಿಂದ ಹಲವಾರು ಶೋಷಿತ ಸಮುದಾಯದವರಿಗೆ ಅನ್ಯಾಯವಾಗಿದೆ. ಎಸ್‌ಸಿ ಮೀಸಲಾತಿ ಪಟ್ಟಿಯಿಂದ ಭೋವಿ, ಬಂಜಾರ, ಕೊರಚ ಸೇರಿದಂತೆ 51 ಜಾತಿಗಳನ್ನು ಕೈ ಬಿಡುವಂತೆ ಸದಾಶಿವ ಆಯೋಗ ಶಿಫಾರಸು ಮಾಡಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಭೋವಿ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಲೋಕೇಶ್, ಸಹ ಕಾರ್ಯದರ್ಶಿ ಕೆ.ಮೋಹನ್ ಕುಮಾರ್, ಪದಾಧಿಕಾರಿಗಳಾದ ವಿ. ನಾಗರಾಜು, ಆರ್. ಮಂಜುನಾಥ್, ಕೆ.ಹನುಮಂತು, ಪ್ರಮೀಳ ರಾಮಚಂದ್ರ, ಸುಗುಣ ಜಿ.ಗೋಪಾಲ್, ರಾಧಾ ಹಾಗೂ ಇತರರು ಪಾಲ್ಗೊಂಡಿದ್ದರು.