ಜಿಲ್ಲೆ

ಅಕ್ಕಿ ಸಿಗದಿರಲು ರಾಜ್ಯ ಬಿಜೆಪಿ ನಾಯಕರು ಕಾರಣ

ಹುಬ್ಬಳ್ಳಿ: ಬಡವರಿಗೆ ಅಕ್ಕಿ ಕೊಡಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ನಮಗೆ ಅಕ್ಕಿ ಸಿಗದೇ ಇರುವುದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಉಚಿತವಾಗಿ ಅಕ್ಕಿ ಕೇಳುತ್ತಿಲ್ಲ. ಹಣ ಕೊಡಲು ಸಿದ್ಧರಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ಕೇಂದ್ರಕ್ಕೆ ರಾಜ್ಯ ಬಿಜೆಪಿ ಮುಖಂಡರು ಚಾಡಿ ಹೇಳಿರುವುದರಿಂದ ಅಕ್ಕಿ ಕೊಡುತ್ತಿಲ್ಲ ಎಂದರು.

ನಾವು ನುಡಿದಂತೆ ನಡೆಯುತ್ತೇವೆ. ಆಗಸ್ಟ್ 15ರೊಳಗೆ ಎಲ್ಲ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಲಿದೆ. ಬಿಜೆಪಿಯವರು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇದಕ್ಕೆ ಆಸ್ಪದ ಕೊಡುವುದಿಲ್ಲ ಎಂದರು.

ಸಾರಿಗೆ ಇಲಾಖೆ ಅಶಕ್ತವಾಗಿಲ್ಲ. ನಮಗೆ ಯಾವ ನಷ್ಟವೂ ಆಗಿಲ್ಲ. ಶಕ್ತಿ ಯೋಜನೆಯಲ್ಲಿ ಕೆಲ ಸಣ್ಣಪುಟ್ಟ ದೋಷಗಳಿದ್ದವು. ಪ್ರಾರಂಭದಲ್ಲಿ ಮಹಿಳೆಯರು ಹೆಚ್ಚಾಗಿ ಓಡಾಡುತ್ತಿದ್ದಾರೆ. ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಿದ್ದಾರೆ. ಒಂದು ಸಾರಿ ಹೋಗಿ ಬಂದವರು ಮತ್ತೆ ಆ ಕಡೆ ಹೋಗುವುದಿಲ್ಲ. ನಾವು ಇದನ್ನು ಸರಿ ಮಾಡುತ್ತೇವೆ. ಸಾರಿಗೆ ಇಲಾಖೆ ಇರುವುದು ಜನರ ಅನುಕೂಲಕ್ಕೆ. ದಿನಕ್ಕೆ 1 ಲಕ್ಷ 56 ಸೆಡ್ಯೂಲ್ಡ್ ಬಸ್​ಗಳು ಓಡಾಡುತ್ತಿವೆ. ನಮ್ಮ ಸಿಬ್ಬಂದಿ ಪ್ರಯಾಣಿಕರ ಜತೆಗೆ ಸೌಜನ್ಯದಿಂದ ವರ್ತಿಸಬೇಕು. ಪ್ರಯಾಣಿಕರೂ ಸಹಕರಿಸಬೇಕು. ಎಲ್ಲ ದೋಷ ನಿವಾರಿಸುತ್ತೇವೆ ಎಂದರು.