ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಯಕ್ತಿಕ ಹಿತಾಸಕ್ತಿ ಮತ್ತು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಆರ್ಥಿಕ ಪರಿಸ್ಥಿತಿ ಅಧೋಗತಿ ತಲುಪಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿದರು.
ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿರುವುದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಮುಂದಾಲೋಚನೆ ಇಲ್ಲದ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಇದೊಂದು ಹುಚ್ಚು, ಮೂರ್ಖತನದ ಸರ್ಕಾರ ಎನ್ನುವ ಭಾವನೆ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಚಿತ ಯೋಜನೆಗಳಿಂದ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ಈ ಉಚಿತ ಗ್ಯಾರಂಟಿಗಳಿಂದ ಕುಟುಂಬಗಳಲ್ಲಿ ಒಡಕು ಉಂಟಾಗಿದೆ. ಗಂಡ, ಹೆಂಡತಿ ನಡುವೆ ಒಡಕು ಉಂಟಾಗಿದ್ದು, ಅವರವರಲ್ಲೇ ಗಲಾಟೆ ತಂದಿಟ್ಟಿದ್ದಾರೆ. ಇದನ್ನು ತಿಳಿಯಬೇಕಾದರೆ ಸರ್ಕಾರ ಸಮೀಕ್ಷೆಯನ್ನೇ ಮಾಡಿಸಲಿ ಎಂದರು.
ವೃದ್ಧಾಪ್ಯ ವೇತನ ನೀಡುವುದಕ್ಕೂ ಒಂದು ಮಾನ ದಂಡ ಇದೆ. ಉಚಿತ ಯೋಜನೆ ಜಾರಿ ಮಾಡಲು ಮಾನದಂಡ ಅನುಸರಿಸಬೇಕು. ಗ್ಯಾರಂಟಿ ಯೋಜನೆಗೆ ಕೆಲವು ಮಾನದಂಡ ಬೇಡವಾ? ಸರ್ಕಾರ ಸಾಲ ಮಾಡಿ ಜನತೆಗೆ ಉಚಿತ ಯೋಜನೆ ಕೊಡುವ ಅಗತ್ಯ ಇದೆಯಾ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಇಲ್ಲಿವರೆಗೆ 76 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಈ ಪ್ರಮಾಣದ ಹಣವನ್ನು ಎಷ್ಟು ಯೋಜನೆಗಳಿಗೆ ಹಂಚಿಕೆ ಮಾಡಬಹುದಿತ್ತು ಎಂಬ ಅರಿವು ಸರ್ಕಾರಕ್ಕಿಲ್ಲವೇ? 76 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರ ಫಲ ಏನು ಎಂದರು.
ಜನತೆಗೆ ಉದ್ಯೋಗ ನೀಡಿ: 2013ರಲ್ಲಿ ಹಲವು ಜನಪರ ಕಾರ್ಯಕ್ರಮಗಳ ಪಟ್ಟಿ ತಯಾರಿಸಿ ಕೊಟ್ಟಿದ್ದ್ದೆವು. ನಾನು, ರಮೇಶ್‌ಕುಮಾರ್ ಮತ್ತು ಸಿ.ಎಂ. ಇಬ್ರಾಹಿಂ ಸೇರಿ ಅನ್ನಭಾಗ್ಯ ಕಲ್ಪನೆ ಕೊಟ್ಟಿದ್ದ್ದೆವು. ಈ ಚಿಂತನೆ ಸಿದ್ದರಾಮಯ್ಯನ ತಲೆಯಲ್ಲಿ ಇರಲಿಲ್ಲ. ಆಗ ಉತ್ತಮ ಜನಪರ ಆಡಳಿತ ಕೊಟ್ಟಿದ್ದರು. ಆದರೆ, ಈಗ ಸರಿಯಾಗಿ ಆಡಳಿತ ನಡೆಸುತ್ತಿಲ್ಲ. ಹಾಗಾಗಿ ಜನರಿಗೆ ಉಚಿತವಾಗಿ ಕೊಡುವ ಬದಲು ಉದ್ಯೋಗ ಕೊಡಿ ಎಂದು ಒತ್ತಾಯಿಸಿದರು.
ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಲೆ ಇಲ್ಲದಂತಾಗಿದೆ. ವ್ಹೀಲ್ ಚೇರ್‌ನಲ್ಲಿ ಕೂತು ಆಡಳಿತ ನಡೆಸಲಿಕ್ಕೆ ಆಗಲ್ಲ. ಸದನದ ನಡೆದ ಘಟನೆ ನಾಚಿಕೆಗೇಡು. ಮಾನ ಮರ್ಯಾದೆ ಇರುವವರು ಸದನದಲ್ಲಿ ಇರಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹನಿಟ್ರ್ಯಾಪ್‌ನಲ್ಲಿ 48 ಜನ ಇದ್ದಾರೆ ಎಂದು ಕಾಂಗ್ರೆಸ್‌ನ ಸಚಿವರೇ ಹೇಳಿದ್ದಾರೆ. ಅದನ್ನ ಯಾರು ಅಂತ ಹೊರ ತಗೆಯುವ ಕೆಲಸ ವಿಪಕ್ಷದವರೂ ಮಾಡಲಿಲ್ಲ. ಒಟ್ಟಾರೆ ಎರಡೂ ಪಕ್ಷಗಳೂ ದಿವಾಳಿಯಾಗಿವೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿರುವ ಬಿಜೆಪಿಗೆ ಆಡಳಿತವೂ ಗೊತ್ತಿಲ್ಲ, ವಿರೋಧ ಪಕ್ಷ ಸ್ಥಾನ ನಿಭಾಯಿಸುವುದೂ ಗೊತ್ತಿಲ್ಲ. ಸರ್ಕಾರವನ್ನು ಧೈರ್ಯದಿಂದ ಪ್ರಶ್ನಿಸುವ ತಾಕತ್ತೂ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಹೊಂದಾಣಿಕೆ ಹೆಚ್ಚಾಗಿದೆ. ಆದ್ದರಿಂದಲೇ ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲುವು ಸಾಧಿಸಿದ್ದು ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಹೊರಗಿನಿಂದ ಕಾಂಗ್ರೆಸ್‌ಗೆ ವಲಸೆ ಬಂದು ಮುಖ್ಯಮಂತ್ರಿಯಾದರು. ಮೂಲ ಕಾಂಗ್ರೆಸ್ಸಿಗರೇ ಅಗಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಗಲಿ ಬಿಡಿ ಎಂದು ಪ್ರಶ್ನೆಗೆ ಉತ್ತರಿಸಿದರು.