ಎನ್.ಆರ್.ಪುರ: ಅಗ್ರಹಾರದ ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಅವರಿಗೆ ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೌರಭ ರತ್ನ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠ ಹಾಗೂ ಮಂಗಳೂರಿನ ಕಥಾ ಬಿಂದು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಕಥಾಬಿಂದು ಗೀತಾ ಸಾಹಿತ್ಯೋತ್ಸವ ಸಮಾರಂಭದಲ್ಲಿ ಸೌರಭ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಮಠದ ಸುಗಣೇಂದ್ರ ತೀರ್ಥ ಶ್ರೀಪಾದಂಗಳು, ಸುಶೀಂದ್ರ ತೀರ್ಥ ಪಾದಂಗಳು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಇದ್ದರು.
ಸಾಹಿತಿ ಭಾಗ್ಯನಂಜುಂಡ ಸ್ವಾಮಿ ಅವರು ಈವರೆಗೆ ವಿವಿಧ ಪತ್ರಿಕೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 300 ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಸಮನ್ವಯತೆ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಆಕಾಶವಾಣಿಯಲ್ಲೂ 50ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ.
ಇವರಿಗೆ ಹರಿಹರಪುರ ಮಠದ ಶ್ರೀಗಳಿಗಳಿಂದ ಸಾಧಕ ಶ್ರೀ, ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ, ಕನ್ನಡ ಸಿರಿ, ಲಲಿತ ಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.