ಜಿಲ್ಲೆ

ರೇಖಲಗೆರೆ ಶಾಲೆಯ ನಾಗಭೂಷಣ್ ಅತ್ಯುತ್ತಮ ಶಿಕ್ಷಕ

ಧನಂಜಯ ಎಸ್.ಹಕಾರಿ.

ಚಳ್ಳಕೆರೆ: ತಾಲೂಕಿನ ರೇಖಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆ.ಟಿ.ನಾಗಭೂಷಣ್, ಪ್ರಸಕ್ತ ವರ್ಷದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ್ದಾರೆ.

ರಾಜ್ಯಪಾಲರ ಆದೇಶ ಅನುಸಾರವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್. ಹೊಸಮಠ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸೆ.5ರಂದು ರಾಜ್ಯ ಮಟ್ಟದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ನಾಗಭೂಷಣ್, ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದ ತಿಪ್ಪೇರುದ್ರಪ್ಪ, ಸಾವಿತ್ರಮ್ಮ ದಂಪತಿಗಳ ಪುತ್ರರಾಗಿದ್ದಾರೆ. 2008ರಲ್ಲಿ ಇಲ್ಲಿನ ರೇಖಲಗೆರೆ ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕರಾಗಿ ನೇಮಕರಾಗಿದ್ದರು.

ವಿದ್ಯಾರ್ಥಿಗಳ ಪರಿಣಾಮಕಾರಿ ಕಲಿಕೆಯ ಪ್ರಗತಿಯಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಬೋಧನಾ ಪ್ರಕ್ರಿಯೆಯಲ್ಲಿ ಇವರು ಅಳವಡಿಸಿಕೊಂಡ ತಂತ್ರಜ್ಞಾನ ಆಧಾರಿತ ವಿನೂತನ ಸೃಜನಾತ್ಮಕ ಕೌಶಲ್ಯಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಗೆ ದಾರಿ ಮಾಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿನ ಇವರ ಸೇವಾ ಮಾದರಿಯನ್ನು ಗುರುತಿಸಿ ಭಾರತೀಯ ಸಾಂಸ್ಕೃತಿಕ ರತ್ನ ಪ್ರಶಸ್ತಿ ಲಭಿಸಿದೆ. ಅಲ್ಲದೇ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದು.