ಮಂಗಳೂರು: ಭಾರತೀಯ ಆರ್ಥೋಡಾಂಟಿಕ್ ಸೊಸೈಟಿ ಮಂಗಳೂರು ಹಾಗೂ ಆರ್ಥೋಡಾಂಟಿಕ್ ಅಧ್ಯಯನ ಗುಂಪಿನ ಸಹಯೋಗದೊಂದಿಗೆ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ.4ರಿಂದ 13ರ ವರೆಗೆ ಆರ್ಥೋಡಾಂಟಿಕ್ ಜಾಗೃತಿ ಸಪ್ತಾಹದ ಮೂಲಕ ನಾನಾ ಕಾರ‌್ಯಕ್ರಮಗಳು, ಜಾಗೃತಿ ಕೆಲಸಗಳು ಸಾಗಲಿದೆ ಎಂದು ಮುಖ್ಯ ಸಂಚಾಲಕ ಡಾ. ಮಿಥುನ್ ನಾಯಕ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ಥೊಡಾಂಟಿಕ್ಸ್ ದಂತ ವೈದ್ಯಶಾಸದ ಒಂದು ವಿಶೇಷ ಶಾಖೆಯಾಗಿದ್ದು, ಇದು ಹಲ್ಲಿನ ಮತ್ತು ಮುಖದ ರೋಗ ನಿರ್ಣಯ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯೊಂದಿಗೆ ವ್ಯವಹರಿಸುತ್ತದೆ. ನಾನಾ ಆರ್ಥೋಡಾಂಟಿಕ್ ಚಿಕಿತ್ಸೆಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಏಕೆಂದರೆ ಅವುಗಳು ಹಲ್ಲು ಮತ್ತು ಒಸಡುಗಳ ನೋಟ, ಕಾರ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು. ತಪ್ಪು ಕಲ್ಪನೆಗಳನ್ನು ಪರಿಹರಿಸಲು, ಹೊಸ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಕ್ರ ದಂತ ಚಿಕಿತ್ಸೆ ಸುಧಾರಿಸುವುದು ಈ ಜಾಗೃತಿ ಸಪ್ತಾಹದ ಮುಖ್ಯ ಉದ್ದೇಶವಾಗಿದೆ ಎಂದರು.
ಈ ವರ್ಷದ ಮುಖ್ಯ ಧ್ಯೇಯ ವಾಕ್ಯವಾದ ‘ಎಂಬ್ರೇಸ್ ಚೇಂಜ್ ಎಂಪವರ್ ಕಾನ್ವಿಡೆನ್ಸ್’ ಮೂಲಕ ಮಾನಸಿಕ ಆರೋಗ್ಯದ ಪ್ರಚಾರವನ್ನು ಉತ್ತೇಜಿಸುವುದು ಮತ್ತು ಅಸಮರ್ಪಕತೆಯ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು, ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ ಎಂದರು.
ಅ.5ರಂದು ಜಾಗೃತಿ ಸಪ್ತಾಹಕ್ಕೆ ಚಾಲನೆ ಸಿಗಲಿದೆ. ಇದರ ಜತೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ಸಪ್ತಾಹಕ್ಕೆ ಸಂಬಂಸಿದಂತೆ ರಸಪ್ರಶ್ನೆ ಸ್ಪರ್ಧೆ, ಅ.9ರಂದು ದೇರಳಕಟ್ಟೆಯ ಶಾಲೆಗಳಲ್ಲಿ ಜಾಗೃತಿ, ಅ.11ರಂದು ವಿಶ್ವ ಹೆಣ್ಣು ಮಕ್ಕಳ ದಿನದ ಅಂಗವಾಗಿ ಪೊಲೀಸ್ ಉದ್ಯೋಗಿಗಳ ದಂತ ಜಾಗೃತಿ, ಅ.13ರಂದು ಮಹಿಳಾ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಕುರಿತು ಮ್ಯಾರಥಾನ್, ಕದ್ರಿ ಪಾರ್ಕ್‌ನಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಸ್ವರ್ಧೆ ನಡೆಯಲಿದೆ ಎಂದರು.
ಭಾರತೀಯ ಆರ್ಥೋಡಾಂಟಿಕ್ ಸೊಸೈಟಿ ಮಂಗಳೂರು ಪದಾಕಾರಿಗಳಾದ ಡಾ. ಚೈತ್ರಾ ಲಕ್ಷ್ಮಿ, ಡಾ. ಅರ್ಜುನ್ ನಾಯಕ್, ಡಾ. ಧೀರಜ್ ಶೆಟ್ಟಿ, ಡಾ.ಶ್ರವಣ್ ಶೆಟ್ಟಿ, ಡಾ. ಅಶಿತ್ ಎಂ.ವಿ ಹಾಗೂ ಡಾ. ಸಿದ್ಧಾರ್ಥ್ ಶೆಟ್ಟಿ ಉಪಸ್ಥಿತರಿದ್ದರು.