ಉಡುಪಿಯ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಿಂದ ಭಗವದ್ಗೀತಾ ಪಾಠಕ್ಕೆ ಸುಗುಣೇಂದ್ರ ಶ್ರೀಗಳು ಚಾಲನೆ ನೀಡಿದರು. ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು, ಉಡುಪಿ ರಾಮನಾಥ ಆಚಾರ್ಯ, ಡಾ. ಬಿ.ಗೋಪಾಲ ಆಚಾರ್ಯ, ವಿದ್ವಾನ್ ವೇದವ್ಯಾಸ ಪುರಾಣಿಕ್ ಹಾಗೂ ಮಠದ ಶಿಷ್ಯರು ಇದ್ದರು. 
ಜಿಲ್ಲೆ

ನೈಜ ಗೀತಾನ್ವೇಷಣೆಯೇ ನಮ್ಮ ಪ್ರಧಾನ ಗುರಿ

ಪರ್ಯಾಯ ಪುತ್ತಿಗೆ ಶ್ರೀ ಹೇಳಿಕೆ | ಸರ್ವಜ್ಞ ಪೀಠದಿಂದ ಪಾಠ ಪ್ರಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ
ಈಗಾಗಲೇ ಉಡುಪಿಯ ಶ್ರೀಕೃಷ್ಣನಿಗೆ ಗೀತಾಧ್ಯಾಯ ಭಾವ ಪರಿಚಯ ಕೃತಿ ಸಮರ್ಪಿಸಿದ್ದು, ನಾವು ಗೀತಾನ್ವೇಷಣೆಯ ಸಂಕಲ್ಪ ಮಾಡಿದ್ದೇವೆ. ನೈಜ ಗೀತಾಸ್ವರೂಪವನ್ನು ಭಕ್ತರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿಯೇ ಸರ್ವಜ್ಞ ಪೀಠದಿಂದ ಗೀತಾಪಾಠ, ಪ್ರವಚನ ಪ್ರಾರಂಭಿಸುತ್ತಿದ್ದೇವೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ವಿಶ್ವ ಗೀತಾ ಪರ್ಯಾಯದ ಅವಧಿಯಲ್ಲಿ ಹಮ್ಮಿಕೊಂಡಿದ್ದ ಜ್ಞಾನ ಯಜ್ಞದ ನಿಮಿತ್ತವಾಗಿ ಉಡುಪಿ ಮಠದಲ್ಲಿರುವ ಸರ್ವಜ್ಞ ಪೀಠದಿಂದ ಭಗವದ್ಗೀತಾ ಪಾಠಕ್ಕೆ ಭಾನುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸೂರ್ಯ ಪಾರ್ಥಸಾರಥಿ ಅಲಂಕಾರದಲ್ಲಿ ಉಡುಪಿಯ ಶ್ರೀಕೃಷ್ಣ.

ವಿಮರ್ಶಾತ್ಮಕ ಪಾಠ

ಶ್ರೀ ಮಧ್ವಾಚಾರ್ಯರು ಕರುಣಿಸಿರುವ ಭಾಷ್ಯದ ನೆರಳಲ್ಲಿ ಹೊಸ ದೃಷ್ಟಿಕೋನದಿಂದ ವಿಮರ್ಶಾತ್ಮಕ ಪಾಠ ಬೋಧಿಸಲು ಸಂಕಲ್ಪ ಮಾಡಿದ್ದೇವೆ. ಗೀತೆಯ ಉಪದೇಶವನ್ನು ಮೊದಲು ಸ್ವೀಕರಿಸಿದವನು ಸೂರ್ಯ ಎನ್ನುವುದಾಗಿ ಶ್ರೀಕೃಷ್ಣನು ಗೀತೆಯಲ್ಲಿ ತಿಳಿಸಿದ್ದಾನೆ. ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಂ ಎಂದು. ಅದಕ್ಕೆ ಸಂವಾದಿ ಎಂಬಂತೆ ಪಾಠದ ಮೊದಲ ದಿನವೇ ನಮ್ಮ ಉಡುಪಿ ಶ್ರೀಕೃಷ್ಣನು ಸೂರ್ಯ ಪಾರ್ಥಸಾರಥಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾನೆ. ಶ್ರೀಕೃಷ್ಣನ ಪರಮಾನುಗ್ರಹದಿಂದ ಪಾಠವು ನಿರ್ವಿಘ್ನವಾಗಿ ಸಾಗಲಿ ಎಂದು ಸುಗುಣೇಂದ್ರ ಶ್ರೀ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕಿರಿಯ ಪಟ್ಟದ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ, ಡಾ. ಬಿ.ಗೋಪಾಲ ಆಚಾರ್ಯ, ವಿದ್ವಾನ್ ವೇದವ್ಯಾಸ ಪುರಾಣಿಕ್ ಹಾಗೂ ಮಠದ ಶಿಷ್ಯರು, ಭಕ್ತರು ಪಾಲ್ಗೊಂಡಿದ್ದರು.