ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಸಿಂಧನೂರು ತಹಸೀಲ್ದಾರ್ ಅರುಣ್‌ಕುಮಾರ ದೇಸಾಯಿಗೆ ರೈತರು ಮನವಿ ಸಲ್ಲಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ, ಜಿಲ್ಲಾ ಅಧ್ಯಕ್ಷ ನಾಗನಗೌಡ, ಪ್ರಮುಖರಾದ ಬಸವರಾಜ ಹಂಚಿನಾಳ, ದುರ್ಗಪ್ಪ ತಡಕಲ್, ಅಣ್ಣಪ್ಪ ಜಾಲಿಹಾಳ, ಬಸವರಾಜ ಇತರರಿದ್ದರು. 
ಜಿಲ್ಲೆ

ಹಿಂಗಾರು ಜೋಳ ಖರೀದಿ ನೋಂದಣಿ ಆರಂಭಿಸಿ

ಮಾನ್ವಿ/ಸಿಂಧನೂರು: ಹಿಂಗಾರು ಜೋಳ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಿ ಪೋತ್ನಾಳ ಸಮೀಪದ ರಾಗಲಪರ್ವಿ ಕ್ರಾಸ್ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಾನ್ವಿ ಹಾಗೂ ಸಿಂಧನೂರು ತಾಲೂಕಿನ ರೈತರು ಮಂಗಳವಾರ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಈಗಾಗಲೇ ರೈತರು ಜೋಳದ ರಾಶಿ ಮಾಡಿ, ನಾಲ್ಕು ತಿಂಗಳು ಕಳೆದಿದೆ. ಆದರೆ, ಈವರೆಗೆ ಖರೀದಿ ನೋಂದಣಿ ಪ್ರಕ್ರಿಯೆ ನಡೆದಿಲ್ಲ. ಕೂಡಲೇ ನೋಂದಣಿ ಆರಂಭಕ್ಕೆ ಕ್ರಮಕೈಗೊಳ್ಳಬೇಕು. ಗೋದಾಮಿನಲ್ಲಿ ಗ್ರೇಡರ್‌ಗಳು ವಿನಾಕಾರಣ ತೊಂದರೆ ಕೊಡುತ್ತಿದ್ದು, ಸಿಬ್ಬಂದಿಗೆ ಖರೀದಿ ಕೇಂದ್ರದ ನಿಯಮಗಳನ್ನು ತಿಳಿಸಬೇಕು. ಈ ವಿಚಾರದಲ್ಲಿ ವಿಳಂಬ ಮಾಡಬಾರದು.

ಸರ್ಕಾರ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರುಗಳ ಕಾಯ್ದೆ ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಬಾರದು. ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣ ಹಕ್ಕುಪತ್ರ ನೀಡಬೇಕು. ಅಕಾಲಿಕ ಮಳೆಯಿಂದ ಭತ್ತದ ಬೆಳೆ ನಷ್ಟ ಆಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಗ್ರಾಮೀಣ ಭಾಗದ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ನೀರಾವರಿ ಇಲಾಖೆ ಪ್ರಕಾರ ನೀರಾವರಿ ಯೋಜನೆಯ 1 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದೆಂಬ ಕಾನೂನಿದೆ. ಆದರೂ ಶಿರನಗುಡಿ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಮಾನ್ವಿ ಉಪ ತಹಸೀಲ್ದಾರ್ ವಿರುಪಣ್ಣ ಮತ್ತು ಸಿಂಧನೂರು ತಹಸೀಲ್ದಾರ್ ಅರುಣ್‌ಕುಮಾರ ದೇಸಾಯಿಗೆ ಮನವಿ ಸಲ್ಲಿಸಲಾಯಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ, ಪ್ರಮುಖರಾದ ಬಸವರಾಜ ಹಂಚಿನಾಳ, ಶಿವನಗೌಡ ಗುಡದೂರು, ದುರುಗಪ್ಪ, ಅಣ್ಣಪ್ಪ ಜಾಲಿಹಾಳ, ಯುಸೂಫ್‌ಸಾಬ್ ಕುನ್ನಟಗಿ, ಇಸ್ಮಾಯಿಲ್‌ಸಾಬ್, ರೈತರಾದ ಖಾದರ್‌ಬಾಷಾ, ಮಲ್ಲಿಕಾರ್ಜುನ, ಶಿವಶಂಕರ ಇತರರಿದ್ದರು.