ಕೆ.ಆರ್.ನಗರ: ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ದೇವಾಲಯದಲ್ಲಿ 90 ಲಕ್ಷ ವೆಚ್ಚದ ಸಂರಕ್ಷಣಾ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಅರ್ಕೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ 2.10 ಕೋಟಿ ರೂಪಾಯಿಗಳನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು 2026 ರೊಳಗೆ ದೇವಸ್ಥಾನದ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.
ಪ್ರಾಚ್ಯವಸ್ತು ಇಲಾಖೆಯ ವತಿಯಿಂದ ಈಗ 90 ಲಕ್ಷ ರೂಗಳು ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭವಾಗಲಿದೆ. ನಂತರ ಹಂತ-ಹಂತವಾಗಿ ಪೂರ್ಣಗೊಳಿಸಿ ಕಾವೇರಿ ನದಿ ಮಧ್ಯದಲ್ಲಿ ನಿರ್ಮಾಣ ಮಾಡುತ್ತಿರುವ ಶಿವನ ಪ್ರತಿಮೆಯ ಕೆಲಸವನ್ನು ವೇಗವಾಗಿ ಮಾಡಿಸಲಾಗುತ್ತದೆ ಎಂದರು.
ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಯುವಾಗ ದರ್ಶನಕ್ಕೆ ತೊಂದರೆಯಾಗಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಿ ದೇವಾಲಯದ ಸುತ್ತ ಉದ್ಯಾನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
ತಾಲೂಕಿನ ಕಪ್ಪಡಿ ಪುಣ್ಯಕ್ಷೇತ್ರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ 25 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ನಡೆಸಿ ಕಾಮಗಾರಿ ಆರಂಭಿಸಲಾಗುತ್ತದೆ. ಕಪ್ಪಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಿದ್ದು, ಈ ಸಂಬಂಧ ಮಠದ ಶ್ರೀಗಳ ಜತೆ ಚರ್ಚಿಸಿ ಅವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಭಕ್ತರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ಉತ್ತಮ ಕೆಲಸಗಳನ್ನು ಮಾಡುವುದಾಗಿ ನುಡಿದರು.
ಕೆ.ಆರ್. ನಗರದಿಂದ ಹೆಬ್ಬಾಳು ಮಾರ್ಗವಾಗಿ ಚುಂಚನಕಟ್ಟೆ ಹೋಬಳಿ ಕೇಂದ್ರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಆರು ಕೋಟಿ ರೂ ಹಣ ಮಂಜೂರಾಗಿದ್ದು, ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸುವುದಾಗಿ ಹೇಳಿದರು.
ದೇವಾಲಯ ಜೀರ್ಣೋದ್ಧಾರ ಕಾಮಗಾರಿ ನಡೆಯುವುದರಿಂದ 2025ನೇ ಸಾಲಿನ ಫೆಬ್ರವರಿ ತಿಂಗಳಲ್ಲಿ ನಡೆಯಬೇಕಿದ್ದ ಜಾತ್ರೆ ಮತ್ತು ರಥೋತ್ಸವವನ್ನು ರದ್ದುಪಡಿಸಲಾಗಿದ್ದು, ಭಕ್ತರು ಮತ್ತು ಸಾರ್ವಜನಿಕರು ವಿಚಾರವನ್ನು ಅರಿತು ಸಹಕರಿಸಿ ಎಂದು ಕೋರಿದರು. ಪ್ರತಿದಿನ ಅರ್ಚಕರು ಪೂಜೆ ನೆರವೇರಿಸಲಿದ್ದು ಸಾರ್ವಜನಿಕರಿಗೆ ಅವಕಾಶ ವಿರುವುದಿಲ್ಲ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ನಿರ್ದೇಶಕ ಸೈಯದ್ ಜಾಬೀರ್, ಸರಿತಾ ಜವರಪ್ಪ, ಕೆ.ಎನ್.ಪ್ರಸನ್ನ ಕುಮಾರ್, ಪುರಸಭೆ ಸದಸ್ಯ ಕೋಳಿ ಪ್ರಕಾಶ್, ಶಂಕರಸ್ವಾಮಿ, ನಟರಾಜು, ಮಾಜಿ ಸದಸ್ಯ ಕೆ.ವಿನಯ್, ರಾಜ್ಯ ಕಾಂಗ್ರೆಸ್ ಎಸ್.ಟಿ. ವಿಭಾಗದ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಮುಖಂಡ ಗಂಧನಹಳ್ಳಿವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಎಸ್. ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಎಚ್.ಎಚ್.ನಾಗೇಂದ್ರ, ತಹಸೀಲ್ದಾರ್ ಜೆ. ಸುರೇಂದ್ರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ಬಿ.ವೆಂಕಟೇಶ್, ತಾಪಂ ಇಒ ಕುಲದೀಪ್ ಮತ್ತಿತರರು ಇದ್ದರು.