ಜಿಲ್ಲೆ

ಜಿಲ್ಲೆಯಲ್ಲಿ 21 ಕೂಸಿನ ಮನೆ ಪ್ರಾರಂಭ: ಜಿಪಂ ಉಪಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನರೇಗಾ ಯೋಜನೆಯ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಪ್ರದೇಶದ ಸ್ಥಳೀಯ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಜಿಲ್ಲೆಯಲ್ಲಿ 21 ಶಿಶುಪಾಲನಾ ಕೇಂದ್ರ(ಕೂಸಿನ ಮನೆ)ಕ್ಕೆ ಆ.15ರಂದು ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಕೆ.ಪಿ.ಸಂಜೀವಪ್ಪ ತಿಳಿಸಿದರು.

ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಕೂಸಿನ ಮನೆಯ ಶಿಶು ಆರೈಕೆ ಮಾಡಲು ತರಬೇತಿದಾರರಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕೂಸಿನ ಮನೆ ಸ್ಥಾಪನೆಯೂ ಒಂದು. ಗ್ರಾಮೀಣ ಭಾಗದ ಮಕ್ಕಳ ಹಿಂದಿನ ಪರಿಸ್ಥಿತಿಗೂ ಪ್ರಸ್ತುತ ದಿನದ ಪರಿಕಲ್ಪನೆ ಬೇರೆಯೇ ಇದೆ ಎಂದರು.

ಮೊದಲ ಹಂತದಲ್ಲಿ ಆ.15ರಂದು ಜಿಲ್ಲೆಯ 21 ಗ್ರಾಮ ಪಂಚಾಯಿತಿಯಲ್ಲಿ ಕೂಸಿನ ಮನೆ ಪ್ರಾರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗಾಗಿ ಸರ್ಕಾರ ಯೋಜನೆ ರೂಪಿಸಿದೆ. ಅಂತೆಯೇ ಮಕ್ಕಳನ್ನು ನೋಡಿಕೊಳ್ಳಲು ಆಯ್ಕೆಯಾದವರಿಗೆ 3 ದಿನದ ತರಬೇತಿ ನೀಡಲಾಗುತ್ತಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ ಮಾತನಾಡಿ, ಕೂಸಿನ ಮನೆ ಗ್ರಾಮೀಣ ಭಾಗದ ಮಹಿಳಾ ಕೂಲಿಕಾರರ ಕೇಂದ್ರೀತ ಯೋಜನೆಯಾಗಿದೆ. ಕಾರ್ಯಾಗಾರದಲ್ಲಿ ಮಕ್ಕಳ ಲಾಲನೆ ಪಾಲನೆ ಪೋಷಣೆ ಬಗ್ಗೆ ಸಮರ್ಪಕವಾಗಿ ತಿಳಿಕೊಳ್ಳಬೇಕು. ಆಗ ಮಾತ್ರ ಯೋಜನೆ ಉತ್ತಮ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸಾಧ್ಯ. ಮಕ್ಕಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಜಿ.ಪಂ ಸಹಾಯಕ ಕಾರ್ಯದರ್ಶಿ ಮೋಹನ್‌ಕುಮಾರ್, ತರಬೇತುದಾರರಾದ ಮಂಜುಳಾ, ಶಿವರಂಜನ್, ಸುನೀಲ್, ಕುಸುಮಾ, ಮುನಿರಾಜು ಇತರರಿದ್ದರು.