ಬೆಳಗಾವಿ: ಗೋಪಾಲ ಜಿನಗೌಡಾ ಫೌಂಡೇಶ್‌ನಿಂದ ‘ಗೋಪಾಲ ಜಿನಗೌಡಾ ಸುವಿಧಾಶ್ರಮ’ ಹೆಸರಿನ ವೃದ್ಧಾಶ್ರಮ ಪ್ರಾರಂಭಿಸಲಾಗಿದೆ. ಈ ಮೂಲಕ ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಫೌಂಡೇಶನ್ ಅಧ್ಯಕ್ಷ ಗೋಪಾಲ ಜಿನಗೌಡಾ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸುವಿಧಾಶ್ರಮವು ಒಂದು ಎಕರೆ ಜಾಗದಲ್ಲಿ ಸಕಲ ಸೌಲಭ್ಯಗಳ ಪೂರೈಕೆ, ಸುಸಜ್ಜಿತ ಕೊಠಡಿಗಳು, ಪ್ರಾರ್ಥನೆಗಾಗಿ ಗಣೇಶ ಮಂದಿರ, ಸ್ವಚ್ಛಂದ ಪರಿಸರದಲ್ಲಿ ಯೋಗಾಸನ, ದೂರದರ್ಶನ ಸಭಾಂಗಣ, ವ್ಯಾಯಾಮ ಮತ್ತು ಕ್ರೀಡಾ ಸಾಮಗ್ರಿಗಳ ಪರಿಕರಗಳನ್ನು ಹೊಂದಿದೆ. ಪರಿಶುದ್ಧ ನೀರು, ಸಮತೋಲನ ಸಸ್ಯಾಹಾರ ಏಕರೂಪ ಊಟದ ವ್ಯವಸ್ಥೆ, ಶಾರೀರಿಕ ಸಮಸ್ಯೆಗಳಿಗಾಗಿ ಪರಿಣಿತ ವೈದ್ಯರ ಸೇವೆ, ಮಾನಸಿಕ ಆರೋಗ್ಯದ ಕಾಳಜಿ, ಕಡಿಮೆ ವೆಚ್ಚದಲ್ಲಿ ಸುರಕ್ಷತೆ ಕಲ್ಪಿಸಲಾಗುತ್ತಿದೆ. ಅಗತ್ಯ ಸೇವೆಗೆ ಸಿಬ್ಬಂದಿ ಸದಾ ಲಭ್ಯವಿರುತ್ತಾರೆ. ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆ, ವಾಯು ವಿಹಾರಕ್ಕಾಗಿ ಉದ್ಯಾನವನ, ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಸುವಿಧಾಶ್ರಮ ಜೀವನದ ಇಳಿವಯಸ್ಸಿನ ಹಿರಿಯರಿಗೆ ನೆಮ್ಮದಿಯ ಆಗರವಾಗಿ ಕಾರ್ಯ ನಿರ್ವಹಿಸಲಿದೆ ಎಂದರು. ಈ ಸುವಿಧಾಶ್ರಮದ ಮಾಹಿತಿ ಅಥವಾ ಪ್ರವೇಶಕ್ಕೆ ಮೊ. 9448578387, 9845442871ಗೆ ಸಂಪರ್ಕಿಸಬಹುದು ಎಂದರು.
ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಫೌಂಡೇಶನ್ ಮತ್ತು ಗೋಪಾಲ ಜಿನಗೌಡ ಎಜ್ಯುಕೇಶನ್ ಟ್ರಸ್ಟ್ ಇಂದು ಹೆಮ್ಮರವಾಗಿ ಬೆಳೆದು, ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದೆ. ಇಂದಿನ ಶೈಕ್ಷಣಿಕ ವ್ಯಾಪಾರೀಕರಣದಲ್ಲಿ ಡೋನೇಷನ್ ರಹಿತ ಪ್ರವೇಶ ನೀಡುವ ಮೂಲಕ ಇಂದು ತಾಲೂಕಿನ 21 ಗ್ರಾಮದ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡಲಾಗುತ್ತದೆ. ಅದೇ ಆವರಣದಲ್ಲಿ ಪಿಯುಸಿ ಮಹಾವಿದ್ಯಾಲಯಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದರು.
ಈಗಾಗಲೇ ವ್ಯಯಕ್ತಿಕವಾಗಿ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ದಾನವನ್ನು ನೀಡುವ ಮೂಲಕ ಬೆಳಗಾವಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಸಹಾಯ ಮಾಡಲಾಗಿದೆ. ಮಜಗಾಂವದಲ್ಲಿ ಗೋಮಟೇಶ ವಿದ್ಯಾಪೀಠದ ಗೋಪಾಲ ಜಿನಗೌಡಾ ಕನ್ನಡ, ಮರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು 1,200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉದ್ಯಮಬಾಗದಲ್ಲಿರುವ ಜಿತೋ ಗೋಪಾಲ ಜಿನಗೌಡಾ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬೃಹತ್ ದಾನ ನೀಡಿರುವುದು ಪ್ರಮುಖವಾಗಿವೆ ಎಂದರು.
ಫೌಂಂಡೇಶನ್ ನಿರ್ದೇಶಕರಾದ ಸಂತೋಷ ಜಿನಗೌಡಾ, ಅಭಯ ಅವಲಕ್ಕಿ , ಕುಂತುಸಾಗರ ಹರದಿ, ವಿಕ್ರಮ ಜೈನ ಸುದ್ದಿಗೋಷ್ಠಿಯಲ್ಲಿದ್ದರು.