ಜಿಲ್ಲೆ

ತಡೆಗೋಡೆ ದುರಸ್ತಿ ಪ್ರಾರಂಭ

reportermys

ಮೈಸೂರು: ಅರಮನೆ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಕುಸಿದಿರುವ ಅರಮನೆ ಹೊರ ಕಾಂಪೌಂಡ್‌ನ ದುರಸ್ತಿ ಕಾಮಗಾರಿ ಕೈಗೊಳ್ಳಲು ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಟೆಂಡರ್ ಆಹ್ವಾನಿಸಿ ಒಂದನೇ ದರ್ಜೆ ಗುತ್ತಿಗೆದಾರ ರಾಮಚಂದ್ರ ಅವರಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ನಿಯಮಾನುಸಾರ ಕೆಲಸ ಪ್ರಾರಂಭಿಸಿದ್ದಾರೆ ಎಂದು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.


ಪ್ರತಿವರ್ಷ ದಸರಾ ಮಹೋತ್ಸವದ ಪ್ರಯುಕ್ತ ಪೂರ್ವಾಭ್ಯಾಸವಾಗಿ ಫಿರಂಗಿ ಮದ್ದು ಸಿಡಿಸುವುದು ವಾಡಿಕೆಯಾಗಿರುತ್ತದೆ. ಅದರಂತೆ ಫಿರಂಗಿ ಮದ್ದು ಸಿಡಿಸುವ ಪೂರ್ವಾಭ್ಯಾಸವನ್ನು ಆರಮನೆಯ ಬಿಸಿಲು ಮಾರಮ್ಮ ದೇವಸ್ಥಾನ ಬಳಿ ಇರುವ ವಾಹನ ನಿಲ್ದಾಣದಲ್ಲಿ ನಡೆಸುತ್ತಿರುವುದು ವಾಡಿಕೆ. ಕೋಟೆ ಗೋಡೆಯು ಹಳೆಯದಾಗಿರುವುದರ ಜತೆಗೆ ಫಿರಂಗಿಯ ಶಬ್ದ ಹಾಗೂ ಮಳೆಯ ಕಾರಣದಿಂದ ಬಿರುಕು ಬಿಟ್ಟಿದೆ. ಅರಮನೆಯ ಮುಖ್ಯ ಕಟ್ಟಡ, ಅರಮನೆಯ ಆವರಣದಲ್ಲಿ ಬರುವ ಎಲ್ಲ ದೇವಸ್ಥಾನಗಳು ತುಂಬ ಹಳೆಯ ಕಟ್ಟಡಗಳಾಗಿದ್ದು, ಸುರಕ್ಷತೆಯ ಹಿತದೃಷ್ಟಿಯಿಂದ ಮದ್ದು ಸಿಡಿಸುವ ಪೂರ್ವಾಭ್ಯಾಸ ಕಾರ್ಯಕ್ರಮವನ್ನು ಬೇರೆ ಕಡೆಗೆ ವರ್ಗಾಯಿಸಲು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಲಾಗಿದೆ. ಕುಸಿದಿರುವ ಸುಮಾರು 20 ಮೀ. ಉದ್ದದ ಗೋಡೆ ಸೇರಿದಂತೆ ಸುಮಾರು 50 ಮೀ. ಉದ್ದದ ಗೋಡೆ ದುರಸ್ತಿಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.