ಮೈಸೂರು: ಬೆಳೆಯುತ್ತಿರುವ ಮೈಸೂರು ನಗರದಿಂದ ಮತ್ತಷ್ಟು ವಿಮಾನಗಳ ಸೇವೆ ಆರಂಭಿಸಬೇಕಿದೆ ಎಂದು ಮೈಸೂರು ಸಂಘ, ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರ ಎಲ್ಲ ರೀತಿಯಲ್ಲೂ ಬೆಳೆಯುತ್ತಿದ್ದು, ಸಾಕಷ್ಟು ಕಂಪನಿಗಳು, ಉತ್ಪಾದನಾ ಘಟಕಗಳು ತಲೆ ಎತ್ತಿ ನೆಲೆ ಕಂಡುಕೊಂಡಿವೆ. ಇಂತಹ ಸಂದರ್ಭದಲ್ಲಿ ಮೈಸೂರು ವಿಮಾನ ನಿಲ್ದಾಣ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅತ್ಯಂತ ಹೆಚ್ಚು ಬಳಕೆಯಾಗುತ್ತಿದ್ದ ಗೋವಾ ಹಾಗೂ ಕೊಚ್ಚಿನ್ ವಿಮಾನಗಳ ಹಾರಾಟವನ್ನು ಕೆಲ ದಿನಗಳ ಹಿಂದಷ್ಟೇ ರದ್ದು ಮಾಡಲಾಯಿತು. ಈಗ ಏರ್ ಅಲಯನ್ಸ್‌ನ ಚೆನ್ನೈ ವಿಮಾನ ಹಾರಾಟ ರದ್ದಾಗುತ್ತಿದೆ. ಹೀಗೆ ಒಂದೊಂದೇ ವಿಮಾನ ರದ್ದಾದರೆ ಕೊನೆಗೆ ಮೈಸೂರು ವಿಮಾನ ನಿಲ್ದಾಣ ಮೊದಲಿನಂತೆ ಚಟುವಟಿಕೆ ಇಲ್ಲದಂತಾಗಿ ಪಾಳು ಬೀಳಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಬೆಳೆಯುವ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಬೇರೆ ನಗರಗಳೊಂದಿಗೆ ಸಂಪರ್ಕ ಸುಲಭವಾಗಿಸುವುದು ಕಷ್ಟದ ಕೆಲಸ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು. ಮೊದಲಿನಂತೆ ಗೋವಾಗೆ ವಿಮಾನ ಆರಂಭಿಸಬೇಕು. ಜತೆಗೆ, ವಾರಕ್ಕೆ ಎರಡು ಬಾರಿ ತಿರುಪತಿ ಹಾಗೂ ಶಿರಡಿಗೆ ವಿಮಾನ ಹಾರಾಟ ಆರಂಭವಾಗಬೇಕು. ಕೊಯಮತ್ತೂರು ಹಾಗೂ ಕೊಚ್ಚಿನ್‌ಗೂ ವಿಮಾನ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದರಿಂದಾಗಿ ಧಾರ್ಮಿಕ ಪ್ರವಾಸಕ್ಕೆ ಹೋಗುವವರು, ಉದ್ಯಮಿಗಳು, ಸಾಮಾನ್ಯ ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುತ್ತದೆ. ಅಲ್ಲದೆ, ಇಲ್ಲಿಗೆ ಬರುವವರ ಸಂಖ್ಯೆಯೂ ಹೆಚ್ಚಾಗಿ ನಗರದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಆದ್ದರಿಂದ ಹೆಚ್ಚು ವಿಮಾನಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.