ಜಿಲ್ಲೆ

ಕಲಾವಿದರು, ಸಾಹಿತಿಗಳ ಹೆಸರಲ್ಲಿ ಪ್ರತಿಷ್ಠಾನ ರಚಿಸಲು ಡಾ.ಕೋರೆ ಒತ್ತಾಯ

ಬೆಳಗಾವಿ: ಜಿಲ್ಲೆಯ ಸಾಹಿತಿಗಳು ಮತ್ತು ಕಲಾವಿದರು ಗಡಿಯಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕ ಶ್ರೀಮಂತಗೊಳಿಸಿದ್ದಾರೆ. ಸರ್ಕಾರ ಅವರ ಹೆಸರಿನಲ್ಲಿ ಪ್ರತಿಷ್ಠಾನಗಳನ್ನು ರಚಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಒತ್ತಾಯಿಸಿದರು.

ಇಲ್ಲಿನ ನೆಹರು ನಗರದ ಕನ್ನಡ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿ.ಎಸ್.ಗವಿಮಠ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಂಗಭೂಮಿಯ ದಿಗ್ಗಜ ಏಣಗಿ ಬಾಳಪ್ಪ, ಎಸ್.ಡಿ.ಇಂಚಲ, ಡಿ.ಎಸ್.ಕರ್ಕಿ ಮತ್ತಿತರರು ನಾಡಿಗೆ ಬಹುಮೌಲಿಕವಾದ ಕೊಡುಗೆ ನೀಡಿದ್ದಾರೆ. ಸರ್ಕಾರ ಅವರನ್ನು ಕಡೆಗಣಿಸುತ್ತ ಬಂದಿದೆ. ಇನ್ನಾದರೂ ಎಚ್ಚೆತ್ತುಕೊಂಡು, ಈ ತಾರತಮ್ಯ ನಿವಾರಿಸಬೇಕು. ಪ್ರತಿಷ್ಠಾನಗಳನ್ನು ರಚಿಸಿ ಅವರ ಸೇವೆಯನ್ನು ಜೀವಂತವಾಗಿಡುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

‘ಬಿ.ಎಸ್‌.ಗವಿಮಠ ನನ್ನ ಬಾಲ್ಯದ ಸ್ನೇಹಿತ. ಅವರ ಹೆಸರಿನಲ್ಲಿ ರಚಿಸಿರುವ ಪ್ರತಿಷ್ಠಾನ ಗಡಿಯಲ್ಲಿ ಹಲವು ರಚನಾತ್ಮಕ ಚಟುವಟಿಕೆ ಕೈಗೊಳ್ಳಲಿ’ ಎಂದು ಆಶಿಸಿದರು.

ಸಾಹಿತಿ ಡಾ.ಬಸವರಾಜ ಜಗಜಂಪಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು.

ಡಾ.ದಯಾನಂದ ನೂಲಿ, ಡಾ.ರಾಮಕೃಷ್ಣ ಮರಾಠೆ, ಬಸವರಾಜ ಗಾರ್ಗಿ ಅವರನ್ನು ಸತ್ಕರಿಸಲಾಯಿತು. ಬಿ.ಎಸ್‌.ಗವಿಮಠ, ಸಾಹಿತಿ ಡಾ.ಗುರುಪಾದ ಮರಿಗುದ್ದಿ, ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವಿ.ಮಾನ್ವಿ, ಪ್ರೊ.ಎಂ.ಎಸ್.ಇಂಚಲ, ಯ.ರು.ಪಾಟೀಲ, ಸುಭಾಷ ಏಣಗಿ, ಶಿವನಗೌಡ ಪಾಟೀಲ, ಡಾ.ಸರಜೂ ಕಾಟ್ಕರ್, ಡಾ.ಗುರುದೇವಿ ಹುಲೆಪ್ಪನವರಮಠ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಲ್.ವಿ.ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಅಕ್ಬರ್‌ ಸನದಿ ವಂದಿಸಿದರು. ಪ್ರೊ.ವಿಶ್ವನಾಥ ಚೌಗಲಾ, ಡಾ.ಮಹೇಶ ಗುರನಗೌಡರ ನಿರೂಪಿಸಿದರು.