ಮೇಲುಕೋಟೆ: ಅನುಪಯುಕ್ತವಾಗಿರುವ ಜಿಲ್ಲಾ ಪಂಚಾಯಿತಿಯ ಪ್ರವಾಸಿ ಮಂದಿರವನ್ನು ತಕ್ಷಣ ವಶಕ್ಕೆ ಪಡೆದು ವೈರಮುಡಿ ಬ್ರಹ್ಮೋತ್ಸವ ವೇಳೆಗೆ ಪೊಲೀಸ್ ಠಾಣೆ ಆರಂಭಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎನ್ ನಾಗರಾಜು ಸೂಚಿಸಿದರು.
ನೂತನ ಪೊಲೀಸ್ ಠಾಣೆಗೆ ನೀಡಿರುವ ಜಮೀನನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದ ಅವರು, ಸುಮಾರು ಎರಡು ಎಕರೆಯಲ್ಲಿರುವ ನೀಲಗಿರಿ ಮರಗಳನ್ನು ಅರಣ್ಯ ಇಲಾಖಾಧಿಕಾರಿ ತೆರವುಗೊಳಿಸಿ ಸಮತಟ್ಟು ಮಾಡಬೇಕು. ಇದರಿಂದ ವೈರಮುಡಿ ಉತ್ಸವದಂದು ಭಕ್ತರ ವಾಹನಗಳ ಪಾರ್ಕಿಂಗ್‌ಗೆ ಅನುಕೂಲವಾಗಲಿದೆ. ನಂತರ ಮೇಲುಕೋಟೆ ಪೊಲೀಸ್ ಠಾಣೆಗೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ. ಕಂದಾಯ, ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಪ್ರವೃತ್ತರಾಗಬೇಕು. ಒಂದು ವಾರದಲ್ಲಿ ಜಮೀನು ಮಟ್ಟಮಾಡಿಸಬೇಕು ಎಂದರು.
ಅನೈತಿಕ ಚಟುವಟಿಕೆಗಳ ತಾಣವಾಗಿರುವ ಪ್ರವಾಸಿ ಮಂದಿರವಿರುವ ಸ್ಥಳದಲ್ಲಿ ಎಚ್ಚರವಹಿಸಬೇಕಾಗಿದೆ. ಪಕ್ಕದಲ್ಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರುವ ಕಾರಣ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ಪೊಲೀಸ್ ಠಾಣೆಯನ್ನು ತಕ್ಷಣ ಪ್ರವಾಸಿ ಮಂದಿರಕ್ಕೆ ಬದಲಾಯಿಸುವಂತೆ ಸಲಹೆ ನೀಡಿದರು.
35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಸಮುಚ್ಚಾಯ ಉದ್ಘಾಟನೆಯಾಗಿಲ್ಲ. ಜಿಲ್ಲಾಡಳಿತ ಹಲವು ಬಾರಿ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ವರ್ಷವಾದರೂ ದುರಸ್ತಿ ಮಾಡಿಸಿ ಖಾಸಗಿಯವರ ನಿರ್ವಹಣೆಗೆ ನೀಡುವಂತೆ ತಿಳಿಸಿದರು.
ತಹಸೀಲ್ದಾರ್ ಶ್ರೇಯಸ್, ಗ್ರೇಡ್2 ತಹಸೀಲ್ದಾರ್, ಮೇಲುಕೋಟೆ ದೇವಾಲಯದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್, ಉಪ ತಹಸೀಲ್ದಾರ್ ರಾಜೇಶ್, ಗ್ರಾಮ ಆಡಳಿತಾಧಿಕಾರಿ ರಮೇಶ್ ಇತರರು ಇದ್ದರು.