ಜಿಲ್ಲೆ

ಸ್ಟಾರ್ ಚಂದ್ರು ‘ಕೈ’ಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್: ದಶಕದ ನಂತರ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ

ಮಂಡ್ಯ: ನಿರೀಕ್ಷೆಯಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ ಹೆಸರು ಅಧಿಕೃತಗೊಂಡಿದೆ. ಈಗಾಗಲೇ ಈ ಹೆಸರೇ ಖಚಿತವೆನ್ನುವ ಸತ್ಯ ಕ್ಷೇತ್ರದಲ್ಲಿ ಹಬ್ಬಿದ್ದರಿಂದ ಆಶ್ಚರ್ಯ ಎನಿಸುತ್ತಿಲ್ಲ. ಮುಖ್ಯವಾಗಿ ವಿರೋಧ ಎನ್ನುವ ಸದ್ದೂ ಕೇಳಿಬರುತ್ತಿಲ್ಲ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ ಏಳು ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರನ್ನು ಅಧಿಕೃತಗೊಳಿಸಿದ್ದಾರೆ. ಇದರಲ್ಲಿ ಮಂಡ್ಯವೂ ಸೇರಿಕೊಂಡಿದ್ದು, ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ ಅವರ ಸಹೋದರ, ಉದ್ಯಮಿ ಸ್ಟಾರ್ ಚಂದ್ರುಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಗಮನಾರ್ಹ ಅಂಶವೆಂದರೆ 2014ರ ಬಳಿಕ ಪಕ್ಷದ ಅಭ್ಯರ್ಥಿ ಅಖಾಡಕ್ಕಿಳಿಯಲಿದ್ದಾರೆ.
ಯಾರಿದು ಸ್ಟಾರ್ ಚಂದ್ರು?: ಉದ್ಯಮಿಯಾಗಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಚಂದ್ರು ಅವರು ಮೂಲತಃ ನಾಗಮಂಗಲ ತಾಲೂಕು ಕನ್ನಾಗಟ್ಟ ಗ್ರಾಮದ ರೈತ ಕುಟುಂಬದವರು. ಬಿಎಸ್ಸಿ ಪದವೀಧರರೂ ಆಗಿರುವ ಅವರು ಬೆಂಗಳೂರಿನಲ್ಲಿ ಸಹೋದರ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಆರಂಭಿಸಿದ್ದ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಜತೆಯಾದವರು. ಬಳಿಕ ತಾವೇ ಸ್ಥಾಪಿಸಿದ್ದ ಸ್ಟಾರ್ ಇನ್ಫಾಟೆಕ್ ಸಂಸ್ಥೆಯಿಂದ ಗುರುತಿಸಿಕೊಂಡರು. ಸಹೋದರ ಪುಟ್ಟಸ್ವಾಮಿಗೌಡ ಶಾಸಕರಾಗಿರುವುದರಿಂದ ಇವರಿಗೆ ರಾಜಕೀಯ ನಂಟು ಹೊಸದಲ್ಲ.

ದಶಕದ ನಂತರ ಅಭ್ಯರ್ಥಿ: ಒಂದು ದಶಕದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಮ್ಯಾ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು. ಇದಾದ ಬಳಿಕ ಎದುರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಇನ್ನು 2019ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕೈ ಅಭ್ಯರ್ಥಿ ಇರಲಿಲ್ಲ. ಕಾರಣ ಈ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಅಂತೆಯೇ ಒಪ್ಪಂದದ ಆಧಾರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದರು. ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್‌ನ ಬಹುತೇಕ ನಾಯಕರು ಮೈತ್ರಿ ವಿರುದ್ಧವಾಗಿ ಚುನಾವಣೆ ಮಾಡಿದ ಪರಿಣಾಮ ನಿಖಿಲ್ ಸೋಲುವಂತಾಯಿತು. ಇದೀಗ ಅಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ.

ಜನರಿಗೆ ಪರಿಚಯಿಸುತ್ತಿರುವ ಶಾಸಕರು: ಕೆಲ ತಿಂಗಳಿಂದನಿಂದಲೇ ಸ್ಟಾರ್ ಚಂದ್ರು ಅವರನ್ನು ಕ್ಷೇತ್ರದಲ್ಲಿ ಜನರಿಗೆ ಪರಿಚಯಿಸುವ ಕೆಲಸವನ್ನು ಕಾಂಗ್ರೆಸ್ ಶಾಸಕರು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಾದರೂ ಚಂದ್ರು ಅವರ ಹಾಜರಿ ಇರುತ್ತಿತ್ತು. ಶಾಸಕರು ಕೂಡ ಚುನಾವಣೆಯಲ್ಲಿ ಚಂದ್ರು ಅವರನ್ನು ಬೆಂಬಲಿಸುವಂತೆ ಮನವಿ ಮಾಡುವುದರ ಜತೆಗೆ ಸ್ಥಳೀಯ ಮುಖಂಡರಿಗೆ ಪರಿಚಯ ಮಾಡಿಕೊಡುತ್ತಿದ್ದರು. ಪ್ರಾರಂಭದ ದಿನದಲ್ಲಿ ಸಂಕೋಚದಿಂದಲೇ ಇರುತ್ತಿದ್ದ ಚಂದ್ರು ದಿನಕಳೆದಂತೆ ರಾಜಕೀಯಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

ಬೆಂಬಲಿತ ಸೇರಿದಂತೆ ಏಳು ಜನ ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್‌ಸಿ ಹಾಗೂ ಒಬ್ಬ ಜೆಡಿಎಸ್ ಎಂಎಲ್‌ಸಿ ಸೇರಿದಂತೆ ಜಿಲ್ಲಾ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ನನ್ನ ಹೆಸರನ್ನು ಶಿಫಾರಸು ಮಾಡಿದ್ದರು. ಅದರಂತೆ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಕ್ಷೇತ್ರದ ಜನರು ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ.
ಸ್ಟಾರ್ ಚಂದ್ರು ಕಾಂಗ್ರೆಸ್ ಅಭ್ಯರ್ಥಿ