ಜಿಲ್ಲೆ

ಜಿಲ್ಲೆಯ ಪ್ರತಿಭೆಗಳನ್ನು ಸತ್ಕರಿಸಿ: ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟರಮಣೇಗೌಡ ಮನವಿ

ಮಂಡ್ಯ: ಹೊರ ರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಂಡ್ಯದ ಪ್ರತಿಭೆಗಳನ್ನು ಆಹ್ವಾನಿಸಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಬೇಕೆಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ವೆಂಕಟರಮಣೇಗೌಡ, ಕಲೆ ಸಂಸ್ಕೃತಿಯ ಬೀಡಾಗಿರುವ ಮಂಡ್ಯದಲ್ಲಿ ಸಮ್ಮೇಳನ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ನುಡಿ ಜಾತ್ರೆಗೆ ರಾಜ್ಯ, ಹೊರರಾಜ್ಯಗಳಿಂದ ಗಣ್ಯಾತಿಗಣ್ಯರು, ಸಾಹಿತ್ಯ ಪ್ರಿಯರು, ಕನ್ನಡ ಪ್ರೇಮಿಗಳನ್ನು ಆಹ್ವಾನಿಸಿ, ಸನ್ಮಾನಿಸಿ ಸತ್ಕರಿಸುವ ಕಾರ್ಯವನ್ನು ಪರಿಷತ್ ಹಿಂದಿನಿಂದಲೂ ಅಚ್ಚುಕಟ್ಟಾಗಿ ನೆರವೇರಿಸುತ್ತಾ ಬಂದಿದೆ. ಮಂಡ್ಯ ನೆಲದಲ್ಲಿ ಹುಟ್ಟಿ ವೃತ್ತಿ ಬದುಕಿನ ಅನಿವಾರ್ಯತೆಯಿಂದ ಉದ್ಯೋಗ, ವ್ಯಾಪಾರ ನಿಮಿತ್ತ ವಿದೇಶದಲ್ಲಿ ನೆಲೆಸಿರುವ ಮಂಡ್ಯ ಮೂಲದ ಅನಿವಾಸಿ ಭಾರತೀಯರಿಗೂ ಕನ್ನಡದ ಹಬ್ಬಕ್ಕೆ ಆಹ್ವಾನಿಸಿ ಅವರನ್ನು ತವರು ನೆಲದಲ್ಲಿ ಗೌರವಿಸಬೇಕಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದಿದ್ದಾರೆ.

ಹೊರ ರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿ ವೈದ್ಯಕೀಯ, ಶೈಕ್ಷಣಿಕ, ನ್ಯಾಯಾಂಗ, ತಾಂತ್ರಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಕನ್ನಡದ ಮನಸ್ಸುಗಳನ್ನು ನುಡಿಹಬ್ಬದಲ್ಲಿ ವಿಲೀನಗೊಳಿಸಿ ನುಡಿಜಾತ್ರೆಗೆ ಮತ್ತಷ್ಟು ಮೆರುಗು ತರುವ ಕಾರ್ಯವನ್ನು ಸರ್ಕಾರ, ಜಿಲ್ಲಾಡಳಿತ ಮತ್ತು ಪರಿಷತ್ ಮಾಡುವ ಮೂಲಕ ಮಂಡ್ಯದ ಸೊಗಡನ್ನು ವಿದೇಶಕ್ಕೂ ಪಸರಿಸುವ ಕೀರ್ತಿ ಸಲ್ಲುತ್ತದೆ ಎಂದು ಹೇಳಿದ್ದಾರೆ.

ಮನವಿ ಸ್ವೀಕರಿಸಿದ ಡಾ.ಮಹೇಶ್ ಜೋಷಿ ಅವರು, ಹೊರ ರಾಜ್ಯ ಹಾಗೂ ವಿದೇಶದಲ್ಲಿರುವ ಮಂಡ್ಯ ಮೂಲದವರನ್ನು ಸಮ್ಮೇಳನಕ್ಕೆ ಆಹ್ವಾನಿಸುವಂತಹ ಅತ್ಯುತ್ತಮ ಸಲಹೆಯನ್ನು ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.