ಅಪಘಾತಕ್ಕೆ ಒಳಗಾದ ಲಾರಿಗಳ ಚಿತ್ರ ಒಳಗೆ ಸುದ್ದಿಯಲ್ಲಿದೆ.. 
ಜಿಲ್ಲೆ

ನಿಂತಿದ್ದ ಮಿನಿ ಲಾರಿಗೆ ಲಾರಿ ಡಿಕ್ಕಿ

Kopala - Desk - Eraveni

ಕೂಡ್ಲಿಗಿ: ಪಟ್ಟಣದ ಸಾಸಲವಾಡ ಕ್ರಾಸ್ ಬಳಿ ನಿಂತಿದ್ದ ಮಿನಿ ಲಾರಿಗೆ, ಗುರುವಾರ ರಾತ್ರಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಕೊಟ್ಟೂರು ತಾಲೂಕಿನ ಗಜಾಪುರದ ಮಿನಿ ಲಾರಿ ಚಾಲಕ ಗುರುವಣ್ಣ(40), ಭತ್ತನಹಳ್ಳಿಯ ತಿಪ್ಪಣ್ಣ(55) ಹಾಗೂ ಬಸವರಾಜ(25) ಮೃತರು. ಕೊಟ್ಟೂರು ತಾಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅತನ ಸಂಬಂಧಿಕರು ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನಕ್ಕೆ ಹೊರಟಿದ್ದರು.

ಊರಿನಿಂದ ಮಿನಿ ಲಾರಿಯಲ್ಲಿ ಒಟ್ಟು 10 ಜನರು ಹೊರಟರು, ಸಂಬಂಧಿಕರಿಗಾಗಿ ಕಾಯುತ್ತಾ ಸಾಸಲವಾಡ ಕ್ರಾಸ್ ಬಳಿ ಚಾಲಕ ಗುರುವಣ್ಣ, ತಿಪ್ಪಣ್ಣ, ಬಸವರಾಜ ಮಿನಿ ಲಾರಿ ಹಿಂಬದಿಯಲ್ಲಿ ನಿಂತಿದ್ದರು.

ಈ ವೇಳೆ ಕೊಟ್ಟೂರು ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಲಾರಿಯ ಚಾಲಕ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆಸಿ ನಂತರ ಮಿನಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಇದರಿಂದ ತೀವ್ರವಾಗಿ ಗಾಯಗೊಂಡ ಗುರುವಣ್ಣ ಹಾಗೂ ತಿಪ್ಪಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸವರಾಜ ಕೂಡ್ಲಿಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಮಿನಿ ಲಾರಿಯಲ್ಲಿದ್ದ ಕೆ. ನಾಗಪ್ಪ, ರಾಧಮ್ಮ, ರತ್ನಮ್ಮ, ಶ್ರವಣ ಕುಮಾರ, ಸ್ಯಾವಮ್ಮ, ಮಮತಾ, ಆರು ಹಾಗೂ ಭಗತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಪಡಿಸಿದ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದ. ಪೊಲೀಸರ ಶೋಧ ನಂತರ ಬಳ್ಳಾರಿಯಲ್ಲಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್. ಶ್ರೀ ಹರಿಬಾಬು ಎಲ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.