ಜಿಲ್ಲೆ

ಸಿದ್ದರಾಮಯ್ಯ ವೈಚಾರಿಕ ನಿಲುವಿಗೆ ಪಕ್ಷಬೇಧ ಮರೆತು ಬೆಂಬಲವಾಗಿ ನಿಲ್ಲಿ : ಮಾಜಿ ಮೇಯರ್ ಪುರುಷೋತ್ತಮ್ ಮನವಿ

ಮೈಸೂರು: ಮಾಂಸಾಹಾರ ಸೇವನೆ ವಿಚಾರದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವೈಚಾರಿಕ ನಿಲುವನ್ನು ಎಲ್ಲರು ಪಕ್ಷಬೇಧ ಮರೆತು ಬೆಂಬಲಿಸಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚಿದೆ. ಹಲವಾರು ದೇವಸ್ಥಾನಗಳಲ್ಲಿ ಮಾಂಸವನ್ನು ನೈವೇದ್ಯವಾಗಿ ಅರ್ಪಣೆ ಮಾಡುವ ಪದ್ಧತಿ ಇದೆ. ಆದರೆ, ಮಾಂಸಾಹಾರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಸ್ಪಷ್ಟವಾದ ನಿಲುವನ್ನು ತಳೆದಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರಪತಿ ಭವನದಲ್ಲಿ ಮಾಂಸಾಹಾರ ನಿಷೇಧಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಮುಂದಾಗಿರುವುದು ಸರಿಯಲ್ಲ. ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರು ತಮ್ಮ ಆಹಾರ ಪದ್ಧತಿ ಯಾವುದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಇಂದು ಅವರನ್ನು ಬಿಜೆಪಿ ರಾಷ್ಟ್ರಪತಿಯನ್ನಾಗಿ ಮಾಡಿರಬಹುದು. ಆದರೆ, ಅವರಿಗೆ ಶಿಕ್ಷಣ ದೊರೆತು ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುವಂತೆ ಮಾಡಿದ್ದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ. ಇದನ್ನು ದ್ರೌಪದಿ ಮುರ್ಮು ಅರ್ಥಮಾಡಿಕೊಳ್ಳಬೇಕು ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾವರ್ಕರ್ ಅವರನ್ನು ಹೊಗಳಿ ಮಾತನಾಡಿದ್ದಾರೆ ಎಂದು ಬಿಜೆಪಿ ಶಾಸಕ ಎನ್. ಮಹೇಶ್ ತಾವು ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ಬಿಜೆಪಿ ನಾಯಕರನ್ನು ಓಲೈಕೆ ಮಾಡುವ ಸಲುವಾಗಿ ಮಹೇಶ್ ಸಮಾಜಕ್ಕೆ ತಪ್ಪು ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅಂಬೇಡ್ಕರ್ ಸಾವರ್ಕರ್ ಅವರನ್ನು ಎಲ್ಲಿ ಹೊಗಳಿದ್ದಾರೆ ಎಂಬ ಕುರಿತು ಮಹೇಶ್ ಬಹಿರಂಗ ಚರ್ಚೆಗೆ ಆಗಮಿಸಲಿ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರಾದ ದೇವಯ್ಯ, ಮುನಿಯಯ್ಯ, ಸಿದ್ಧಸ್ವಾಮಿ ಇದ್ದರು.