ಹುಬ್ಬಳ್ಳಿ: ಭಾರತದ ಸನಾತನ ಧರ್ಮವನ್ನು ಅವಹೇಳನ ಮಾಡಿರುವ ತಮಿಳುನಾಡು ಜನಪ್ರತಿನಿಧಿಗಳ ಹೇಳಿಕೆ ಖಂಡಿಸಿ ಸೆ. 12ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹನುಮಂತ ಡಂಬಳ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಂತ್ರಿ ಉದಯನಿಧಿ ಹಾಗೂ ಸಿಎಂ ಎಂ.ಕೆ. ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಘಿ, ಮಲೇರಿಯಾ, ಕರೊನಾಕ್ಕೆ ಹೋಲಿಸಿ ಅವಮಾನ ಮಾಡಿದ್ದಾರೆ. ಸನಾತನ ಧರ್ಮ ನಾಶ ಮಾಡಬೇಕು ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಭಾರತದಲ್ಲಿ ಎಲ್ಲ ಧರ್ಮದವರಿಗೆ ತಮ್ಮದೇ ಆದ ಆಚರಣೆ ಮಾಡಲು ಅವಕಾಶ ಇದೆ. ಸಂವಿಧಾನವು ಪ್ರತಿ ವ್ಯಕ್ತಿಗೆ ಸ್ವಾತಂತ್ರ್ಯ ನೀಡಿದೆ. ಹೀಗಿದ್ದರೂ ಇವರು ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸೆ. 12ರಂದು ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ರಾಷ್ಟ್ರಪತಿಗೆ ಮನವಿ ಪತ್ರ ಕಳಿಸಲಾಗುವುದು ಎಂದರು.
ಎ.ಸಿ. ಗೋಪಾಲ ಅವರು ಮಾತನಾಡಿ, ಸನಾತನ ಕೇವಲ ಯಾವುದೇ ಜಾತಿಗೆ ಸೀಮಿತವಲ್ಲ. ಎಲ್ಲ ಹಿಂದುಗಳಿಗೆ ಸಂಬಂಧಿಸಿದೆ. ಹಾಗಾಗಿ ಪ್ರತಿಭಟನೆಯಲ್ಲಿ ಎಲ್ಲ ಹಿಂದು ಬಾಂಧವರು ಭಾಗವಹಿಸಲಿದ್ದಾರೆ ಎಂದರು.
ಇದಲ್ಲದೇ ಪೊಲೀಸ್ ದೂರು ಕೂಡ ನೀಡಲಿದ್ದೇವೆ ಎಂದು ಮಹಾಸಭಾ ಸಂಟನಾ ಕಾರ್ಯದರ್ಶಿ ವಿಜಯ ನಾಡಜೋಶಿ, ವಕೀಲ ಆರ್.ಡಿ. ಕುಲಕಣಿರ್, ಮನೋಹರ ಪರ್ವತಿ, ಡಾ. ಭಾಸ್ಕರ ಪಾಟೀಲ, ಇತರರು ತಿಳಿಸಿದರು.