ಜಿಲ್ಲೆ

ಇದು ಬರಿ ಮೆಟ್ಟಿಲಲ್ಲೋ ಅಣ್ಣಾ…

ಪಂಕಜ ಕೆ.ಎಂ.

ಬೆಂಗಳೂರು: ಮನೆ ನಿರ್ಮಾಣದಲ್ಲಿ ಅಗಾಧ ಬದಲಾವಣೆ ಕಾಣುತ್ತಿದ್ದೇವೆ. ವಿಶಾಲ ನಿವೇಶನ ಹಾಗೂ ಕೈತುಂಬ ಹಣವಿದ್ದವರು ಹಜಾರ, ಒಳಾಂಗಣ ಮತ್ತು ಮಲಗುವ ಕೋಣೆ, ಅಡುಗೆಮನೆ, ಅತಿಥಿಗಳಿಗೆ ತಂಗುವ ಕೋಣೆ, ಪುಟ್ಟ ಗ್ರಂಥಾಲಯ, ಹೋಮ್ ಥಿಯೇಟರ್, ಮಹಡಿ ಮೇಲೆ ಕಾರ್ಯಕ್ರಮ ನಡೆಸಲು ಆಸನಗಳ ವ್ಯವಸ್ಥೆ.. ಹೀಗೆ ಆಸಕ್ತಿ ಮತ್ತು ಅಭಿರುಚಿಗೆ ಪೂರಕವಾಗಿ ಮನೆ ನಿರ್ಮಿಸುವವರಿದ್ದಾರೆ. ಹೀಗೆ ಅಂದದ ಮನೆಯ ಕನಸು ಸಾಕಾರಗೊಳಿಸಬೇಕೆನ್ನುವವರು ಮೆಟ್ಟಿಲುಗಳ ವಿಚಾರದಲ್ಲೂ ಗಮನಹರಿಸುವ ಅಗತ್ಯವಿದೆ.

ಮಹಡಿ ಏರಲು ಮೆಟ್ಟಿಲುಗಳಿರುತ್ತವಾದರೂ ಅದರ ಕೆಳಗಿನ ಜಾಗವನ್ನು ಹಲವು ಉದ್ದೇಶಗಳಿಗೆ ಬಳಸುತ್ತಾರೆ. ಒಳಭಾಗದಲ್ಲಿ ಮೆಟ್ಟಿಲು ನಿರ್ಮಿಸಿದರೆ, ಅದರ ಬುಡದಲ್ಲಿ ರ‌್ಯಾಕ್ ಜೋಡಿಸಿ, ಪುಸ್ತಕ, ಬಟ್ಟೆ, ಅಲಂಕಾರಿಕ ವಸ್ತುಗಳನ್ನು ಇರಿಸಲಾಗುತ್ತದೆ. ಗೋಡೆಯನ್ನು ವಿಶೇಷವಾಗಿ ಅಲಂಕರಿಸುವುದೂ ಉಂಟು. ಹೊರಭಾಗದಲ್ಲಿ ಮೆಟ್ಟಿಲು ನಿರ್ಮಿಸಿದರೆ, ಸ್ಟೋರ್ ರೂಮ್ ಮಾದರಿಯಲ್ಲಿ ಪುಟ್ಟ ಕೋಣೆ ಕಟ್ಟಿಸುತ್ತಾರೆ. ಕೆಲವರು ಹೊರಭಾಗಕ್ಕೆ ಮೆಟ್ಟಿಲ ಕೆಳಗೆ ಶೌಚಗೃಹ ವ್ಯವಸ್ಥೆ ಮಾಡುತ್ತಾರೆ.

ಆಕರ್ಷಕ ವಿನ್ಯಾಸ:

ಮೆಟ್ಟಿಲುಗಳಲ್ಲಿ ಹಲವು ವಿನ್ಯಾಸಗಳಿವೆ, ನೇರ ಮೆಟ್ಟಿಲು, ‘ಯು’ ಆಕಾರದ ಮೆಟ್ಟಿಲು, ವೃತ್ತಾಕಾರದ ಮೆಟ್ಟಿಲು ಹೀಗೆ ವಿವಿಧ ವಿನ್ಯಾಸದ ಮೆಟ್ಟಿಲುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ವಿನ್ಯಾಸವು ಮನೆಯ ಸ್ಥಳಾವಕಾಶಕ್ಕೆ ಪೂರಕವಾಗಿರಬೇಕು. ಅದಕ್ಕಾಗಿ ಮನೆ ನಿರ್ಮಿಸುವ ಮುನ್ನ ಮೆಟ್ಟಿಲು ಹೇಗಿರಬೇಕು ಎಂಬ ಕಲ್ಪನೆ ಇದ್ದರೆ ಒಳ್ಳೆಯದು. ಕಡಿಮೆ ಸ್ಥಳವಿದ್ದರೆ ಸಣ್ಣ ಅಳತೆಯ ವ್ಯತ್ತಾಕಾರವಾದ ಮೆಟ್ಟಿಲು ಸೂಕ್ತ. ಹೆಚ್ಚಿನ ಜಾಗವಿದ್ದರೆ ವಿಶಾಲ ಮೆಟ್ಟಿಲು ನಿರ್ಮಿಸಿ, ಬದಿಯಲ್ಲಿ ಚಿಕ್ಕ ಹೂಕುಂಡಗಳನ್ನಿರಿಸಿದರೆ ತಂಪಾದ ಅನುಭವ ನೀಡುವುದರೊಂದಿಗೆ ಮನೆಯ ಅಂದವೂ ದ್ವಿಗುಣವಾಗುತ್ತದೆ.

ಸುರಕ್ಷತೆ ಬಗ್ಗೆ ಗಮನಹರಿಸಿ

ಮೆಟ್ಟಿಲು ನಿರ್ಮಿಸುವಾಗ ಸುರಕ್ಷತೆ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳಿಗೆ ಆನುಕೂಲತೆ ಒದಗಿಸಲು ಗ್ರಿಲ್‌ಗಳ ನಡುವೆ ಕಡಿಮೆ ಅಂತರವಿರಲಿ. ಹಿರಿಯರಿಗೆ ಸಹಾಯವಾಗುವಂತೆ ಹೆಚ್ಚು ಕಡಿದಾದ ಮೆಟ್ಟಿಲುಗಳು ಬೇಡ. ಗ್ರಿಲ್‌ಗಳಿಗೆ ಹ್ಯಾಂಡಲ್‌ಗಳನ್ನು ಮರೆಯದೇ ಇರಿಸಿ. ಹಾಗಾದಾಗ ಹತ್ತಿಳಿಯುವಾಗ ಬೀಳುವ ಭೀತಿ ಇರುವುದಿಲ್ಲ. ಒಳಾಂಗಣ ಮೆಟ್ಟಿಲುಗಳನ್ನು ಗ್ರಾನೈಟ್ ಹಾಗೂ ಟೈಲ್ಸ್‌ಗಳಿಂದ ನಿರ್ಮಿಸುವುದರಿಂದ ಜಾರುವ ಅಪಾಯ ಜಾಸ್ತಿ. ಆದ್ದರಿಂದ ಮೆಟ್ಟಿಲುಗಳ ತುದಿಗೆ ಗ್ರಿಪ್‌ಗಳನ್ನು ಅಳವಡಿಸಬೇಕು ಇಲ್ಲವೆ ಕಾರ್ಪೆಟ್ ಹಾಕಬೇಕು.

ಹಲವು ಬಗೆಯ ಮೆಟ್ಟಿಲುಗಳು

ಸಿಮೆಂಟ್, ಮರ, ಕಬ್ಬಿಣ, ಇಟ್ಟಿಗೆ, ಟೈಲ್ಸ್- ಹೀಗೆ ಹಲವು ಬಗೆಯ ಮೆಟ್ಟಿಲುಗಳಿವೆ. ಇತ್ತೀಚೆಗೆ ಮೆಟ್ಟಿಲಿನ ಪಕ್ಕದ ಗ್ರಿಲ್‌ಗೆ ಗಾಜು ಅಳವಡಿಸುವುದು ್ಯಾಷನ್ ಆಗಿದೆ. ಇದು ಐಷಾರಾಮಿ ನೋಟ ನೀಡುತ್ತದೆ. ಈಗಂತೂ ಕಡಿಮೆ ಖರ್ಚಿನಿಂದ ಅದ್ದೂರಿ ಲುಕ್ ನೀಡುವ ಮೆಟ್ಟಿಲುಗಳನ್ನು ಕಟ್ಟಲಾಗುತ್ತದೆ.