ವಿ.ಕೆ.ರವೀಂದ್ರ ಕೊಪ್ಪಳ
ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯ ರಾಜಕೀಯ ರಂಗದಲ್ಲಿ ನಾನಾ ಬೆಳವಣಿಗೆಗಳಾಗುತ್ತಿದ್ದು, ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ತೃತೀಯ ವೇದಿಕೆ ಕಟ್ಟುವ ಲಕ್ಷಣಗಳು ದಟ್ಟವಾಗಿವೆ. ಒಂದೆಡೆ ಇಷ್ಟು ದಿನ ಕಾಂಗ್ರೆಸ್‌ನಲ್ಲಿದ್ದ ಹಲವು ನಾಯಕರು ಅನ್ಯ ಪಕ್ಷಗಳಿಗೆ ತೆರಳಿದರೆ, ವರ್ಷದಿಂದ ಬ್ಲಾಕ್ ಕಾಂಗ್ರೆಸ್ ಹುದ್ದೆಯಿಂದ ಹಿಂದೆ ಸರಿದಿದ್ದ ಸುರೇಶ ಭೂಮರಡ್ಡಿ ಸದ್ಯ ಆ್ಯಕ್ಟೀವ್ ಆಗಿದ್ದು, ವಿವಿಧ ಸಮುದಾಯ ಮುಖಂಡರ ಭೇಟಿ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದೆರಡು ದಶಕದಿಂದಲೂ ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಕುಟುಂಬದವರು ಸುದೀರ್ಘವಾಗಿ ರಾಜಕೀಯದಲ್ಲಿದ್ದಾರೆ. ಎರಡೂ ಕುಟುಂಬಗಳು ತಮ್ಮದೇ ವೋಟ್‌ಬ್ಯಾಂಕ್ ಹೊಂದಿದ್ದು, ಪ್ರಬಲವಾಗಿ ಬೆಳೆದಿವೆ. ಪಂಚಮಸಾಲಿ, ಕುರುಬ ಸಮುದಾಯಗಳು ಬೆನ್ನಿಗಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿವೆ. ಚುನಾವಣೆ ಹಣಾಹಣಿಗೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಮಾ.25ರಂದು ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟಿಸಿದ್ದು, ಈಗಾಗಲೇ ಎರಡು ಬಾರಿ ಶಾಸಕರಾಗಿರುವ ರಾಘವೇಂದ್ರ ಹಿಟ್ನಾಳ್ ಹ್ಯಾಟ್ರಿಕ್ ಗೆಲುವಿನ ಉಮೇದಿನಲ್ಲಿದ್ದಾರೆ. 10 ವರ್ಷದಲ್ಲಿ ಕ್ಷೇತ್ರಕ್ಕೆ ತಂದ ಅನುದಾನ, ಯೋಜನೆಗಳ ಪಟ್ಟಿ ಹಿಡಿದು ಎಲೆಕ್ಷನ್ ಅಖಾಡಕ್ಕೆ ಧುಮುಕಲು ಸಿದ್ಧರಾಗಿದ್ದಾರೆ.
ಆದರೆ, ಹಿಟ್ನಾಳ್ ವಿರುದ್ಧ ಬಿಜೆಪಿಯಿಂದ ಯಾರು ಸೆಣಸಲಿದ್ದಾರೆಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಸಂಪ್ರದಾಯದಂತೆ ಹಿಟ್ನಾಳ್ ವಿರುದ್ಧ ಸಂಸದ ಸಂಗಣ್ಣ ಕರಡಿ ಪ್ರಬಲ ಪೈಪೋಟಿ ನೀಡಬಲ್ಲರು ಎಂಬ ಮಾತುಗಳು ಕೇಳಿಬರುತ್ತಿವೆ. ಇವರ ಬೆಂಬಲಿಗರು ಹಾಗೂ ಬಾಕಿ ನಾಲ್ಕು ಕ್ಷೇತ್ರಗಳ ಸ್ಪರ್ಧಾಳುಗಳು ಸಂಗಣ್ಣಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆನ್ನಲಾಗಿದೆ. ಪಕ್ಷ ಸೂಚಿಸಿದಲ್ಲಿ ಸ್ಪರ್ಧಿಸುವುದಾಗಿ ಸಂಗಣ್ಣ ಹೇಳಿರುವುದು ಕುತೂಹಲ ಹೆಚ್ಚಿಸಿದೆ.
ಮತ್ತೊಂದೆಡೆ ಕಳೆದ ಬಾರಿ ಟಿಕೆಟ್ ಸಿಕ್ಕರೂ ಕೊನೇ ಕ್ಷಣದಲ್ಲಿ ನಡೆದ ಬೆಳವಣಿಗೆಗಳಿಂದ ಅವಕಾಶ ವಂಚಿತರಾದ ಸಿ.ವಿ.ಚಂದ್ರಶೇಖರ್ ಈ ಬಾರಿ ಟಿಕೆಟ್ ಪಡೆದು ಸ್ಪರ್ಧಿಸುವ ಇರಾದೆಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಂದು ಸುತ್ತಿನ ಭೇಟಿ ಮುಗಿಸಿದ್ದಾರೆ. ಇತ್ತೀಚೆಗೆ ಗವಿಮಠ ರಸ್ತೆಯಲ್ಲಿ ಕಚೇರಿ ಆರಂಭಿಸಿದ್ದು, ಮತದಾರರ ಭೇಟಿ, ಸಭೆಗಳನ್ನು ನಡೆಸುವ ಮೂಲಕ ಸ್ಪರ್ಧೆಗೆ ತಯಾರಿ ಮಾಡಿಕೊಂಡಿರುವ ಸೂಚನೆ ನೀಡಿದ್ದಾರೆ. ಆದರೆ, ಕಾರ್ಯಕರ್ತರಲ್ಲಿ ಯಾರು ತಮ್ಮ ಹುರಿಯಾಳು ಆಗಲಿದ್ದಾರೆಂಬ ಗೊಂದಲ ಮುಂದುವರೆದಿದ್ದು, ಹೈಕಮಾಂಡ್ ಯಾವ ಪರಿಹಾರ ಸೂತ್ರ ಹೆಣೆಯಲಿದೆ ಎಂಬ ಚರ್ಚೆಗಳು ನಡೆದಿವೆ.
ಕಾರ್ಯಕರ್ತರಲ್ಲಿ ಅಸಮಾಧಾನ
ಒಂದೆಡೆ ಕೊಪ್ಪಳದ ರಾಜಕಾರಣ ಕರಡಿ-ಹಿಟ್ನಾಳ್ ಕುಟುಂಬಕ್ಕೆ ಮಾತ್ರ ಸೂಕ್ತ ಎಂಬ ಮಾತುಗಳಿದ್ದರೆ, ಮತ್ತೊಂದೆಡೆ ತೃತೀಯ ರಂಗದ ಅವಶ್ಯಕತೆ ಇದೆ ಎಂದು ಕೈ-ಕಮಲ ಪಕ್ಷಗಳ ಕೆಲ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೇ ಅಂಶ ಮುಂದಿಟ್ಟು ಸಿವಿಸಿ ತಮ್ಮ ರಾಜಕೀಯ ದಾಳ ಪ್ರಯೋಗಿಸುತ್ತಿದ್ದಾರೆ. ಉಭಯ ಪಕ್ಷಗಳಲ್ಲಿ ತಮ್ಮ ನಾಯಕರು ಹಾಗೂ ಅವರ ಆಪ್ತ ಹಿಂಬಾಲಕರ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನವಿದ್ದು, ಹೊರಹಾಕಲು ಸೂಕ್ತ ವೇದಿಕೆಗೆ ಕಾಯುತ್ತಿರುವ ಮಾತುಗಳು ರಾಜಕೀಯ ಪಡಾಸಾಲೆಯಲ್ಲಿ ನಿತ್ಯ ಪಿಸುಗುಟ್ಟುತ್ತಿದ್ದು, ಚುನಾವಣೆ ಘೋಷಣೆ ಬಳಿಕ ಬಹಿರಂಗಗೊಳ್ಳಲಿವೆ ಎನ್ನಲಾಗುತ್ತಿದೆ.
ಗುತ್ತಿಗೆದಾರ ಸುರೇಶ ನಡೆ ತೀವ್ರ ಕುತೂಹಲ
ಕಾಂಗ್ರೆಸ್ ಕೊಪ್ಪಳ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾಗಿದ್ದ ಗುತ್ತಿಗೆದಾರ ಸುರೇಶ ಭೂಮರಡ್ಡಿ ವರ್ಷದಿಂದ ಈಚೆಗೆ ತಟಸ್ಥರಾಗಿದ್ದಾರೆ. ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದರೂ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿಲ್ಲ. ಇತ್ತೀಚೆಗೆ ರಾಜಕೀಯ ಚಟುವಟಿಕೆಯಲ್ಲಿ ತೊಡಗಿರುವುದು ಇತರ ಪಕ್ಷಗಳು ಹಾಗೂ ಮತದಾರರ ಚಿತ್ತ ಸೆಳೆಯುತ್ತಿದೆ. ಚುನಾವಣೆ ಮಾಡುವುದಾಗಿ ಹೇಳುತ್ತಿದ್ದು, ಬೆಂಬಲ ನೀಡುವಂತೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದಾರೆ. ನಗರ, ಗ್ರಾಮೀಣ ಭಾಗಗಳಲ್ಲಿ ಸಭೆ, ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದು, ತೃತೀಯ ರಂಗ ಕಟ್ಟುವ ಇರಾದೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಆಕಾಂಕ್ಷಿ ಸಿ.ವಿ.ಚಂದ್ರಶೇಖರ್ ಅವರೊಂದಿಗೆ ನೆಂಟಸ್ಥನ ಬೆಳೆಸಿರುವ ಕಾರಣ ಇವರ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ. ಅವರೇ ಸ್ಪರ್ಧಿಸುವರಾ ಅಥವಾ ಬೀಗರಿಗೆ ಬೆಂಬಲ ನೀಡುವುರಾ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲವಾದರೂ ಚಟುವಟಿಕೆ ತೀವ್ರಗೊಳಿಸಿರುವುದು ತೃತೀಯ ರಂಗಕ್ಕೆ ವೇದಿಕೆ ಕಲ್ಪಿಸಿದೆ.
ನಾನಾ ಕಾರಣಗಳಿಂದ ಇಷ್ಟು ದಿನ ರಾಜಕೀಯವಾಗಿ ತಟಸ್ಥನಾಗಿದ್ದೆ. ಸದ್ಯ ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಆಪ್ತರು, ವಿವಿಧ ಪಕ್ಷಗಳ ಮುಖಂಡರು ಬೆಂಬಲ ಸೂಚಿಸಿದ್ದು, ಚುನಾವಣೆ ಮಾಡಲು ಸಿದ್ಧತೆ ನಡೆಸಿರುವೆ. ಯಾವ ಪಕ್ಷದಿಂದ ಸ್ಪರ್ಧಿಸುವೆ ಅಥವಾ ಯಾರನ್ನು ಬೆಂಬಲಿಸುವೆ ಎಂಬುದನ್ನು ಸದ್ಯಕ್ಕೆ ಹೇಳಲಾರೆ.ಸುರೇಶ ಭೂಮರಡ್ಡಿ, ಕೊಪ್ಪಳ