ಕಿಕ್ಕೇರಿಯಲ್ಲಿ ಸೋಮವಾರ ರಂಗನಕುಣಿತದಲ್ಲಿ ಯುವಕರು ಹಿರಿಯರೊಂದಿಗೆ ಕುಣಿದು ಕುಪ್ಪಳಿಸಿದರು. ನಾಗೇಗೌಡ, ಕೆ.ವಿ.ಅರುಣಕುಮಾರ್, ಸುರೇಶ್, ಉಮೇಶ್, ಲೋಕೇಶ್, ಕೆ.ಜಿ.ಪುಟ್ಟರಾಜು, ಯುವರಾಜ್, ನಾಗರಾಜು, ರಮೇಶ್, ಮಧುಕರ್, ಪುಟ್ಟೇಗೌಡ, ಅಕ್ಷಯ್, ಸತ್ಯ ಪಾಲ್ಗೊಂಡಿದ್ದರು. 
ಜಿಲ್ಲೆ

ಕಿಕ್ಕೇರಿಯಲ್ಲಿ ರಂಗ ಕುಣಿತದ ಸಂಭ್ರಮ

ಲೋಕೇಶ್ ಮನು. ಡಿ

ಕಿಕ್ಕೇರಿ: ಜಾನಪದ ಕಲೆಯಲ್ಲಿ ಒಂದಾದ ರಂಗದ ಕುಣಿತವನ್ನು ಪುಟಾಣಿಗಳ ಗುಂಪಿನೊಂದಿಗೆ ಯುವಕರ ದಂಡು ಪಟ್ಟಣದಲ್ಲಿ ಸಂಭ್ರಮ ಸಡಗರದಿಂದ ಪ್ರದರ್ಶಿಸಿತು.

ಹೋಬಳಿಯ ಜನತೆಗೆ ರಂಗಕುಣಿತ ತುಸು ಮನರಂಜನೆ, ಖುಷಿ ನೀಡಿತು. ಭಾನುವಾರ ರಾತ್ರಿ ಯುಗಾದಿಯ ಸಂಭ್ರಮದೊಂದಿಗೆ ರಂಗದ ಕುಣಿತವನ್ನು ಹಿರಿಯ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಲಾಯಿತು. ಸೋಮವಾರ ಬೆಳಗ್ಗೆ ಗ್ರಾಮದೇವತೆ ಕಿಕ್ಕೇರಮ್ಮನಿಗೆ ರಂಗ ಕುಣಿತದ ಸೇವೆ ಸಲ್ಲಿಸಲಾಯಿತು.

ರಂಗಕುಣಿತಕ್ಕೆ ಯುವಕರು ಹಿರಿಯ ಮಾರ್ಗದರ್ಶನದಲ್ಲಿ ವಾರಗಟ್ಟಲೇ ತಾಲೀಮು ನಡೆಸಿದ್ದರು. ತಮಟೆ ನಾದದ ಏರಿಳಿತಕ್ಕೆ ಕುಣಿಯುವ ಭಂಗಿ ಅಭ್ಯಾಸ ಮಾಡಿಕೊಂಡು ವಿವಿಧ ಕುಣಿತದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. 3, 5 ಹಾಗೂ 7 ಹೆಜ್ಜೆಯ ಮಟ್ಟಿನ ಕುಣಿತಕ್ಕೆ ಲಯವಾಗಿ ಗೆಜ್ಜೆಯ ಸಪ್ಪಳದೊಂದಿಗೆ ಹೆಜ್ಜೆಹಾಕಿದರು.

ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ರಂಗಕುಣಿತಕ್ಕೆ ಚಾಲನೆ ನೀಡಲಾಯಿತು. ಯುವಕರು ಹಿರಿಯರೊಂದಿಗೆ ಕಾಲಿಗೆ ಗೆಜ್ಜೆ ಕಟ್ಟಿ, ತಿಲಕವಿಟ್ಟುಕೊಂಡು ಕೈಯಲ್ಲಿ ಟವಲ್ ಹಿಡಿದು ಸಾಲು ನಿಂತು ಸಜ್ಜಾಗಿದ್ದರು. ವಿವಿಧ ಕುಣಿತದ ಭಂಗಿಗಳನ್ನು ಹಾಕುತ್ತ ರಥಬೀದಿಯಲ್ಲಿ ಸಾಗಿದರು.

ಜಾನಪದ ಸೊಗಡಿನ ರಂಗಕುಣಿತ ಇಲ್ಲಿನ ಹೊಸಬೀದಿ, ಕೆ.ಎಸ್. ನರಸಿಂಹಸ್ವಾಮಿ ವೃತ್ತದಲ್ಲಿ ಸಾಗಿ ಅಂತಿಮವಾಗಿ ಕಿಕ್ಕೇರಮ್ಮ ಗುಡಿಗೆ ತಲುಪಿತು. ಪ್ರಮುಖ ವೃತ್ತಗಳಲ್ಲಿ ಪುಟಾಣಿಗಳು ಸಹ ರಂಗಕುಣಿದ ಪಾಲ್ಗೊಂಡಿದ್ದನ್ನು ಕಂಡು ಹಿರಿಯರು, ಪಾಲಕರು ಖುಷಿಪಟ್ಟರು. ರಜೆಯ ಮಜದಲ್ಲಿದ್ದ ಮಕ್ಕಳಿಗೆ ರಂಗಕುಣಿತ ವಿಶೇಷ ರಂಜನೆ ನೀಡಿತು. ಊರ ಹೊರಗಿನ ಕಿಕ್ಕೇರಮ್ಮನ ಗುಡಿಗೆ ಸಾಗಿ ಅಂತಿಮವಾಗಿ ದೇವಿ ಗುಡಿಯ ಪ್ರವೇಶದ್ವಾರದಲ್ಲಿ ಕುಣಿದು ದೇವಿಗೆ ಗೆಜ್ಜೆ ನಮಸ್ಕಾರ ಹಾಕಿ ರಂಗಕುಣಿತ ಸಮಾಪ್ತಿಗೊಳಿಸಿದರು.

ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ ದೇವಿ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಮುಖಂಡರಾದ ನಾಗೇಗೌಡ, ಕೆ.ವಿ.ಅರುಣಕುಮಾರ್, ಸುರೇಶ್, ಉಮೇಶ್, ಕೆ.ಜಿ.ಪುಟ್ಟರಾಜು, ಸಿಪಾಯಿ ಲೋಕೇಶ್, ಯುವರಾಜ್, ನಾಗರಾಜು, ರಮೇಶ್, ಮಧುಕರ್, ಪುಟ್ಟೇಗೌಡ, ಅಕ್ಷಯ್, ಸತ್ಯ ಪಾಲ್ಗೊಂಡಿದ್ದರು.