ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬೆಳ್ತಂಗಡಿ ತಾಲೂಕಿನ ಪಶುಸಂಗೋಪನೆ ಇಲಾಖೆಯಲ್ಲಿ ಮಂಜೂರಾಗಿರುವ 80 ಹುದ್ದೆಗಳಲ್ಲಿ 70 ಹುದ್ದೆಗಳು ಖಾಲಿ ಬಿದ್ದಿವೆ.
ತಾಲೂಕಿನಲ್ಲಿ ಈ ಹಿಂದಿನ ಜಾನುವಾರು ಗಣತಿ ಪ್ರಕಾರ 67,119 ಹಸು, 492 ಎಮ್ಮೆ, 550 ಹಂದಿ, 17 ಕುರಿ, 3,064 ಆಡುಗಳು ಸೇರಿ 71,242 ಜಾನುವಾರುಗಳಿವೆ. 3 ಪಶು ಆಸ್ಪತ್ರೆ, 9 ಪಶುಚಿಕಿತ್ಸಾಲಯ, 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಬೆಳ್ತಂಗಡಿ, ಧರ್ಮಸ್ಥಳ ವೇಣೂರುಗಳಲ್ಲಿ ಪಶು ಆಸ್ಪತ್ರೆ, ಅಂಡಿಂಜೆ, ನಾರಾವಿ, ಬಾರ್ಯ, ಮಡಂತ್ಯಾರು, ಉಜಿರೆ, ಕಳೆಂಜೊಟ್ಟು (ನೆರಿಯ), ಕೊಕ್ಕಡ, ಅಳದಂಗಡಿಯಲ್ಲಿ ಪಶು ಚಿಕಿತ್ಸಾಲಯಗಳು, ಕಿಲ್ಲೂರು, ಕೇಳ್ತಾಜೆ, ಅರಸಿನಮಕ್ಕಿ, ಕಾಯರ್ತಡ್ಕ, ಕುಪ್ಪೆಟ್ಟಿ, ಮೊಗ್ರು, ಮುಂಡಾಜೆ, ಗರ್ಡಾಡಿಗಳಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಇವೆ. ಇಲ್ಲೆಲ್ಲ ಸಿಬ್ಬಂದಿ ಕೊರತೆ ಶಾಪವಾಗಿ ಪರಿಣಮಿಸಿದೆ.
ಕೆಲವು ಕೇಂದ್ರಗಳಲ್ಲಿ ಓರ್ವ ಸಿಬ್ಬಂದಿ ಕೇಂದ್ರದ ಎಲ್ಲ ಹುದ್ದೆಗಳ ಏಕಪಾತ್ರಾಭಿನಯ ಮಾಡುವ ಅನಿವಾರ್ಯತೆ ಇದೆ. ಪಶುಗಳ ಚಿಕಿತ್ಸೆಗೆ ಹೊರಹೋಗುವ ಸಂದರ್ಭ ಕೇಂದ್ರಕ್ಕೆ ಬೀಗಜಡಿಯ ಬೇಕಾದ ಪರಿಸ್ಥಿತಿ ಇದೆ. ಕೆಲವು ಕೇಂದ್ರಗಳಲ್ಲಿ ವಾರದ 23 ದಿನ ಮಾತ್ರ ಸೇವೆ ಸಿಗುತ್ತಿದೆ. ಇನ್ನು ಕೆಲವೊಂದು ಹುದ್ದೆಗಳಿಗೆ ಎರಡು, ಮೂರು ಕೇಂದ್ರಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಒಂದು ಕೇಂದ್ರದ ಕೆಲಸವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಖಾಲಿ ಇರುವ 30 ಡಿ ದರ್ಜೆ ನೌಕರರಲ್ಲಿ 15 ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದ್ದರೂ ಉಳಿದಿರುವ ಅಗತ್ಯ ಸ್ಥಳಗಳಿಗೆ ನಿಯೋಜನೆಗೊಳಿಸಿಲ್ಲ. ಪ್ರತಿ ಬುಧವಾರ ಹಾಗೂ ಗುರುವಾರ ಸಂಚಾರಿ ಪಶು ಟಕವಿದ್ದು, ಇದರ ಹುದ್ದೆ ಖಾಲಿ ಇರುವುದರಿಂದ ಇರುವ ಸಿಬ್ಬಂದಿಯೇ ಇದನ್ನು ನೋಡಿಕೊಳ್ಳಬೇಕಾಗಿದೆ.
ಹೆಚ್ಚುವರಿ ಜವಾಬ್ದಾರಿ
ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಕೊರತೆಯಿಂದ ನಲುಗುತ್ತಿದೆ. ಸಿಬ್ಬಂದಿಗೆ ಇಲಾಖೆಯ ಬೇರೆ ಬೇರೆ ಯೋಜನೆಗಳ ಜವಾಬ್ದಾರಿ ನೀಡುತ್ತಿದೆ. ಜಾನುವಾರು ಕೃತಕ ಗರ್ಭಧಾರಣೆ, ರೇಬಿಸ್ ಲಸಿಕೆ, ಕಾಲುಬಾಯಿ ಲಸಿಕೆ, ಕಂದು ರೋಗ ಲಸಿಕೆ, ಗಳಲೆ ರೋಗ ಲಸಿಕೆ, ಕೋಳಿಗಳಲ್ಲಿ ಕೊಕ್ಕರೆ ರೋಗ, ಆಡು, ಕುರಿಗಳಿಗೆ ಸಿಡುಬು ಲಸಿಕೆ, ಜಾನುವಾರುಗಳಿಗೆ ಕಿವಿಯೋಲೆ ಹಾಕುವುದು, ಬರಡು ರಾಸು ಚಿಕಿತ್ಸೆ, ಜಾನುವಾರು ವಿಮೆ, ಪಶುಭಾಗ್ಯ, ಅಮೃತ ಯೋಜನೆ, ಜಾನುವಾರು ಪ್ರದರ್ಶನ, ಮಾದರಿ ಸಮೀಕ್ಷೆ ಸೇರಿದಂತೆ ಅನೇಕ ಶಿಬಿರಗಳನ್ನು ಏರ್ಪಡಿಸಬೇಕು. ಜತೆಗೆ ದೈನಂದಿನ ಮಾಹಿತಿಯನ್ನು ತಂತ್ರಾಂಶದ ಮೂಲಕ ದಾಖಲಿಸಿ ಸಲ್ಲಿಸಬೇಕು. ಗ್ರಾಮ ಸಭೆಗಳಿಗೆ ಹಾಜರಾಗಬೇಕು. ಜಾನುವಾರುಗಳ ಆರೋಗ್ಯ ದೃಢೀಕರಣ, ಮರಣೋತ್ತರ ಪರೀಕ್ಷೆ, ನಾನಾ ಯೋಜನೆಗಳಿಗೆ ಪರವಾನಗಿ, ಪರಿಹಾರ ಧನ ಸಂಬಂಧಿತ ಕಾರ್ಯಗಳನ್ನು ನಡೆಸಬೇಕಾಗಿದೆ. ಈ ಎಲ್ಲಾ ವ್ಯವಸ್ಥೆಗಳಲ್ಲಿ ತೊಡಗುವ ಸಿಬ್ಬಂದಿ ಹೈರಾಣರಾಗುತ್ತಿದ್ದಾರೆ. ಪ್ರಗತಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಶೇ.100 ಗುರಿ ತಲುಪಬೇಕಾದ ಜವಾಬ್ದಾರಿ ಹೊರಿಸಲಾಗುತ್ತಿದೆ.
ಕಟ್ಟಡದ ದುರಸ್ತಿಗೆ ಸಿಗದ ಅನುದಾನ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಒದಗಿಸುವುದರಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದರೂ ಜಾನುವಾರುಗಳ ಹೈನುಗಾರರ ಅಭ್ಯುದಯಕ್ಕೆ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಋಣಾತ್ಮಕ ಪರಿಣಾಮ ಬೀರುತ್ತಿರುವುದು ವಿಷಾದನೀಯ. ಅನೇಕ ಯೋಜನೆಗಳು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ. ಇದರ ಜತೆ ಕೆಲವು ಕೇಂದ್ರಗಳ ಕಟ್ಟಡಗಳು ದುರಸ್ತಿಗೆ ಸರಿಯಾದ ಅನುದಾನವು ಮಂಜೂರಾಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
ಖಾಲಿ ಹುದ್ದೆಗಳ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹಲವು ಕಾರ್ಯಕ್ರಮಗಳಿಗೆ ಕೆಎಂಎಫ್ ಸಹಕಾರ ನೀಡುತ್ತಿದ್ದಾರೆ. ಸಿಬ್ಬಂದಿ ಕೊರತೆ ಬಿಟ್ಟರೆ ಇತರ ಯಾವುದೇ ಹೆಚ್ಚಿನ ಸಮಸ್ಯೆ ಇಲ್ಲ. ಡಾ.ರವಿಕುಮಾರ್ ಬೆಳ್ತಂಗಡಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ https://www.vijayavani.net/charmadi-gram-sabha https://www.vijayavani.net/strange-disease-for-rambutan-cultivation