ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕದಲ್ಲಿ ಜನಿವಾರ ಜಟಾಪಟಿ ಜೋರಾಗಿದೆ. ಬೀದರ್, ಶಿವಮೊಗ್ಗದಲ್ಲಿ ಬಳಿಕ ಇದೀಗ ಧಾರವಾಡದಲ್ಲೂ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ರಾಘವೇಂದ್ರನಗರದ, ಜೆಎಸ್ಎಸ್ ಕಾಲೇಜಿನ ನಂದನ್ ಏರಿ ಎಂಬಾತ ಏ. 16ರಂದು ಹುರಕಡ್ಲಿ ಅಜ್ಜ ಕಾಲೇಜಿಗೆ ಸಿಇಟಿ ಬರೆಯಲು ತೆರಳಿದಾಗ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವಾಗಿ ನಂದನ್ ಧರಿಸಿದ್ದ ಜನಿವಾರ ತೆಗೆಯಲು ಹೇಳಿದ್ದಾರೆ. ಆದರೆ ನಂದನ್ ಒಪ್ಪಲಿಲ್ಲ. ಅದನ್ನು ಧರಿಸಿದರೆ ಪರೀಕ್ಷಾ ಕೊಠಡಿಗೆ ಬಿಡುವುದಿಲ್ಲ ಎಂದಿದ್ದಾರೆ. ಆಗ ಅದನ್ನು ತೆಗೆದು ಬ್ಯಾಗ್ನಲ್ಲಿ ಇಡುವುದಾಗಿ ಹೇಳಿದರೂ ಸ್ಪಂದಿಸದೆ ಜನಿವಾರ ಕತ್ತರಿಸಿ ವಿದ್ಯಾರ್ಥಿ ಕೈಗೆ ಕೊಟ್ಟಿದ್ದಾರೆ.
ಘಟನೆಯಿಂದ ಶಾಕ್ಗೆ ಒಳಗಾಗಿದ್ದ ನಂದನ್, ಈ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ. 2ನೇ ದಿನವೂ ಜನಿವಾರ ಇಲ್ಲದೆ ಪರೀಕ್ಷೆ ಬಂದಿದ್ದಾನೆ. ಆದರೆ ರಾಜ್ಯದ ವಿವಿಧ ಕಡೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ತನ್ನ ಅಣ್ಣನ ಬಳಿ ಈ ವಿಷಯ ಪ್ರಸ್ತಾಪಿಸಿದ್ದಾನೆ. ಆತ ತಂದೆಗೆ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ತಂದೆ, ಅದೇ ದಿನ ವಿಚಾರ ಹೇಳಿದ್ದರೆ ನಾನೇ ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದೆ ಎಂದು ಮಗನಿಗೆ ಬೈಯ್ದಿದ್ದಾರೆ.
ಇಂತಹ ಘಟನೆಯಿಂದ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿ ತಂದೆ ವಿವೇಕ ಏರಿ ಆಗ್ರಹಿಸಿದ್ದಾರೆ.