ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ಗುರುವಾರ ಬೆಳ್ಳಂಬೆಳಗ್ಗೆ ಗಾಂಜಾ ಎಸೆದ ಆರೋಪಿಯನ್ನು ಕೆಎಸ್‌ಐಎಸ್‌ಎ್ ಸಿಬ್ಬಂದಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಬಂಟ್ವಾಳ ಕೊಳತ್ತಮಜಲು ಕೋಳಕೇರಿ ನಿವಾಸಿ, ಪ್ರಸ್ತುತ ಉರ್ವ ನಿವಾಸಿ ತಿಲಕ್‌ರಾಜ್ ಪ್ರಕರಣದ ಆರೋಪಿ.
ಪ್ರಕರಣ ವಿವರ: ಜು.2ರಂದು ಮುಂಜಾನೆ 4.20ರ ಸುಮಾರಿಗೆ ಕಾರಾಗೃಹದ ಒಳಗಿರುವ ಅಡುಗೆ ಮನೆ ಪ್ರದೇಶಕ್ಕೆ ಅನುಮಾನಾಸ್ಪದ ವಸ್ತುವನ್ನು ಎಸೆದು ಅಪರಿಚಿತ ವ್ಯಕ್ತಿ ಎಸೆಯುತ್ತಾನೆ. ಇದನ್ನು ಕೆಎಸ್‌ಐಎಸ್‌ಎ್ ಆರ್‌ಪಿಸಿ ಕಿರಣ್ ಗಮನಿಸಿ, ತಕ್ಷಣ ಎಎಸ್‌ಐ ಕಿರಣ್ ಅಂಬಿಗರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಆರೋಪಿಯನ್ನು 500 ಮೀಟರ್ ದೂರಕ್ಕೆ ಬೆನ್ನಟ್ಟಿಕೊಂಡು ಹೋಗಿ ಆರೋಪಿ ತಿಲಕ್‌ರಾಜ್‌ನನ್ನು ಹಿಡಿದಿದ್ದಾರೆ. ಬಳಿಕ ಉಸ್ತುವಾರಿ ಅಧಿಕಾರಿ ಪೊಲೀಸ್ ನಿರೀಕ್ಷಕ ಸುಭಾಷ್ ಅವರಿಗೆ ಮಾಹಿತಿ ನೀಡಿದ್ದು, ಅವರು ಬಂದು ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.
ಮೂಡುಶೆಡ್ಡೆ ನಿವಾಸಿ ಕಿರಣ್ ಎಂಬ ವ್ಯಕ್ತಿಯು ಆರೋಪಿಗೆ ಗಾಂಜಾ, ಲೈಟರ್, ಗಾಂಜಾ ಸೇದುವ ಪೇಪರ್‌ಗಳನ್ನು ಕೊಟ್ಟು ಈ ವಸ್ತುಗಳನ್ನು ಕಾರಾಗೃಹದ ಒಳಗೆ ಎಸೆಯಬೇಕು ಎಂದು ಹೇಳಿ ಈ ಕೃತ್ಯ ಎಸಗಲು 2 ಸಾವಿರ ರೂ.ಗಳನ್ನು ನೀಡಿರುತ್ತಾನೆ. ಇದಾದ ಬಳಿಕ ಕಾರಾಗೃಹದಲ್ಲಿ ಬಂಧಿಯಾಗಿರುವ ಲಾಯ್ ವೇಗಸ್ ಎಂಬಾತನ ಮೊಬೈಲ್ ನಂಬರ್ ನೀಡಿದ್ದು, ಆತನ ಸೂಚನೆಯಂತೆ ಅವನು ಹೇಳಿದ ಜಾಗಕ್ಕೆ (ಕಾರಾಗೃಹ ಅಡುಗೆ ಮನೆ) ಮಾದಕ ವಸ್ತುಗಳನ್ನು ಎಸೆದಿರುವುದಾಗಿ ಆರೋಪಿ ಬರ್ಕೆ ಪೊಲಿಸರ ವಿಚಾರಣೆ ತಿಳಿಸಿರುತ್ತಾನೆ.
ಈ ಪ್ರಕರಣದಲ್ಲಿ ಆರೋಪಿಗಳಾದ ತಿಲಕ್‌ರಾಜ್ ಮತ್ತು ಲಾಯ್ ವೇಗಸ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆಯಡಿ ಮತ್ತು ಕರ್ನಾಟಕ ಕಾರಾಗೃಹಗಳ ತಿದ್ದುಪಡಿ-2022 ಕಾಯಿದೆ 42ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಗೆ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ, ಕೆಎಸ್‌ಐಎಸ್‌ಎ್ ಪೊಲೀಸ್ ಇನ್‌ಸ್ಪೆಕ್ಟರ್ ಸುಭಾಷ್ ಹೆಚ್.ಎನ್. ಹಾಗೂ ಕಾರಗೃಹ ಸಿಬ್ಬಂದಿ ಸಹಕರಿಸಿದ್ದಾರೆ.