ಜಿಲ್ಲೆ

ನೀವು, ಕ್ರೀಡಾಂಗಣವನ್ನು ಭೂತ ಬಂಗಲೆ ಮಾಡಬೇಡಿ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಗೌರಿಬಿದನೂರು ಒಳಾಂಗಣ ಕ್ರೀಡಾಂಗಣವನ್ನು ನೋಡಿದರೆ ಬೇಸರವಾಗುತ್ತದೆ. ಇದನ್ನು ಭೂತ ಬಂಗಲೆಯಾಗಲು ಬಿಡಬೇಡಿ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ನೇತಾಜಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, ಸರ್ಕಾರದ ಅನುದಾನ ವ್ಯರ್ಥವಾಗಬಾರದು. ಕ್ರೀಡಾಂಗಣವು ನಿರ್ಲಕ್ಷ್ಯ ಭಾವನೆಯಲ್ಲಿ ಉಪಯೋಗಕ್ಕೆ ಬಾರದ ಭೂತ ಬಂಗಲೆಯಾದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಯುವ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಕೋಟ್ಯಂತರ ರೂ ಅನುದಾನ ಬಿಡುಗಡೆಗೊಳಿಸಿದೆ. ಇದನ್ನು ಸಮರ್ಥವಾಗಿ ಬಳಸುವಿಕೆ ಅಧಿಕಾರಿಗಳ ಜವಾಬ್ದಾರಿ. ಪ್ರಸ್ತುತ ಕ್ರೀಡಾಂಗಣಕ್ಕೆ ಬಿಡುಗಡೆಯಾಗಿರುವ 3.10 ಕೋಟಿ ರೂ ಅನುದಾನದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಹೆಚ್ಚುವರಿ ಕೆಲಸಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ನೀಡಿದರೆ, ಸೂಕ್ತ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್ ಮಹೇಶ್ ಪತ್ರಿ, ತಾ.ಪಂ.ಇಒ ಹರೀಶ್, ನಗರಸಭೆ ಆಯುಕ್ತೆ ಗೀತಾ ಸೇರಿದಂತೆ ಮತ್ತಿತರರು ಇದ್ದರು.

*ಮಹಿಳಾ ಜಿಮ್‍ ಸಿದ್ಧಪಡಿಸಿ

ಕ್ರೀಡಾಂಗಣದಲ್ಲಿರುವ ಮಹಿಳೆಯರ ಜಿಮ್ ಪರಿಶೀಲಿಸಿದ ಶಾಸಕರು, ಜಿಮ್ ಉಪಯೋಗಕ್ಕೆ ಬಾರದಂತಿದೆ. ಕೂಡಲೆ ಜಿಮ್ ಹಾಗೂ ಮಕ್ಕಳ ಉದ್ಯಾನವನ್ನು ಸಮರ್ಪಕವಾಗಿ ಸಿದ್ಧಪಡಿಸಬೇಕು. ಕ್ರೀಡಾಂಗಣಕ್ಕೆ ಅಗತ್ಯವಿರುವ ತರಬೇತಿದಾರರನ್ನು ತ್ವರಿತವಾಗಿ ನೇಮಿಸಲಾಗುವುದು ಎಂದು ಭರವಸೆ ನೀಡಿದರು.