ಜಿಲ್ಲೆ

ತರಬೇತಿಗೆ ತೆರೆದುಕೊಂಡ ಕ್ರೀಡಾಂಗಣ

Dakshina Kannada

ಭರತ್ ಶೆಟ್ಟಿಗಾರ್ ಮಂಗಳೂರು

ಮೊದಲ ಬಾರಿಗೆ ಎಂಬಂತೆ ಸುಮಾರು ಆರು ತಿಂಗಳ ಕಾಲ ತರಬೇತಿ, ಕ್ರೀಡಾ ಚಟುವಟಿಕೆಗಳಿಂದ ದೂರವಿದ್ದ ಕ್ರೀಡಾಪಟುಗಳು ಮತ್ತೆ ಕ್ರೀಡಾಂಗಣದತ್ತ ಮುಖ ಮಾಡಿದ್ದು, ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಮುಖ್ಯವಾಗಿ ಅಥ್ಲೆಟಿಕ್ಸ್‌ಗೆ ಸಂಬಂಧಿಸಿದ ಕ್ರೀಟಾಪಟುಗಳು ಮಾತ್ರ ತರಬೇತಿ ಪಡೆಯುತ್ತಿದ್ದಾರೆ. ಕೋವಿಡ್ ನಿಯಮಾವಳಿ ಉಲ್ಲಂಘನೆಯಾಗುವ ಕ್ರೀಡೆಗಳ ತರಬೇತಿಗೆ ಅವಕಾಶ ಸಿಕ್ಕಿಲ್ಲ. ಕ್ರೀಡಾಂಗಣ ಪ್ರವೇಶಿಸುವ ಪ್ರತಿಯೊಬ್ಬ ಕ್ರೀಡಾಪಟು, ತರಬೇತುದಾರರು ಮಾಸ್ಕ್ ಧರಿಸಬೇಕಿದ್ದು, ಕೈಗಳನ್ನು ಸ್ಯಾನಿಟೈಸ್ ಮಾಡಬೇಕಿದೆ. ಜತೆಗೆ ಥರ್ಮಲ್ ಸ್ಕಾೃನಿಂಗ್‌ಗೂ ಒಳಗಾಗಬೇಕಿದೆ.

ಬೆಳಗ್ಗೆ ಒಂದೆರಡು ಮತ್ತು ಸಾಯಂಕಾಲ ಒಂದೆರಡು ಗಂಟೆ ತರಬೇತಿ ನಡೆಯುತ್ತಿದ್ದು, ಕಾಲೇಜು ಮಟ್ಟದ 50ರಷ್ಟು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ತಂಡವಾಗಿ ಆಡುವ ಕಬಡ್ಡಿ, ವಾಲಿಬಾಲ್, ಬಾಸ್ಕೆಟ್‌ಬಾಲ್, ಮೊದಲಾದ ಕ್ರೀಡೆಗಳ ಆಟಗಾರರಿಗೆ ತರಬೇತಿ ನೀಡಲಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಲಕರು ಅನುಮತಿ ನೀಡದಿರುವುದರಿಂದ ಮೈದಾನಕ್ಕೆ ಬರುತ್ತಿಲ್ಲ. ಕ್ರೀಡಾ ಹಾಸ್ಟೆಲ್‌ಗಳೂ ಮುಚ್ಚಿರುವುದರಿಂದ ವಿದ್ಯಾರ್ಥಿಗಳು ಮನೆಯಲ್ಲಿದ್ದು, ತರಬೇತಿಯಿಂದ ವಂಚಿತರಾಗಿದ್ದಾರೆ. ಕ್ರೀಡಾಂಗಣದಲ್ಲಿ ಜಿಮ್ ಕಸರತ್ತಿಗೂ ಅವಕಾಶ ನೀಡಲಾಗಿಲ್ಲ.

ಕ್ರೀಡಾಕೂಟಗಳು ಅನುಮಾನ: ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಕ್ರೀಡಾಕೂಟಗಳ ಆಯೋಜನೆ ಕಷ್ಟ. ರಾಷ್ಟ್ರಮಟ್ಟದಲ್ಲಿ ಕೆಲವು ಕ್ರೀಡೆಗಳಿಗೆ ಸಂಬಂಧಿಸಿ ವೇಳಾಪಟ್ಟಿ ಬಿಡುಗಡೆಯಾದರೂ ಆಯೋಜಿಸುವುದು ಹೇಗೆ ಎನ್ನುವ ಪ್ರಶ್ನೆಗಳಿವೆ. ಶಾಲಾ-ಕಾಲೇಜು ಮಟ್ಟದ ಕ್ರೀಡಾ ಚಟುವಟಿಕೆಗಳೂ ರದ್ದಾಗುವ ಸಾಧ್ಯತೆ ಹೆಚ್ಚು. ಇದರಿಂದ ಕ್ರೀಡಾಪಟುಗಳು ತಮ್ಮ ಒಂದು ವರ್ಷದ ಸಾಧನೆ ಕಳೆದುಕೊಳ್ಳಬೇಕಾಗುತ್ತದೆ. ಜತೆಗೆ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ರದ್ದು ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ರದ್ದುಗೊಂಡಿದೆ. ವರ್ಷಾಂತ್ಯದ ವೇಳೆಗೆ ಎಲ್ಲ ಸರಿಯಾಗಿ ಸರ್ಕಾರ ಅನುಮತಿ ನೀಡಿದರೆ ಜಿಲ್ಲಾಮಟ್ಟದ ಒಂದು ಕ್ರೀಡಾಕೂಟ ಆಯೋಜಿಸುವುದಾಗಿ ಕ್ರೀಡಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಆರಂಭ?: ದ.ಕ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆ ವ್ಯಾಪ್ತಿಗೆ ಬರುವ ಮಂಗಳಾ ಕ್ರೀಡಾಂಗಣ, ಮೂಡುಬಿದಿರೆಯ ಸ್ವರಾಜ್ ಮೈದಾನ, ಪುತ್ತೂರಿನ ತಾಲೂಕು ಕ್ರೀಡಾಂಗಣಗಳಲ್ಲಿ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.1ರಿಂದ ತರಬೇತಿ ನಡೆಯುತ್ತಿದೆ. ಕಾರ್ಕಳ ಮತ್ತು ಕುಂದಾಪುರ ಕ್ರೀಡಾಂಗಣದಲ್ಲಿಯೂ ಕ್ರೀಡಾಪಟುಗಳು ಅಭ್ಯಾಸ ಆರಂಭಿಸಿದ್ದಾರೆ. ಈಜುಕೊಳಕ್ಕೆ ಸದ್ಯಕ್ಕೆ ಅವಕಾಶ ನೀಡಲಾಗಿಲ್ಲ. ಕ್ರೀಡಾಪಟುಗಳ ಸಂಖ್ಯೆ ಹಿಂದಿಗಿಂತ ತುಂಬಾ ಕಡಿಮೆ ಇದೆ ಎಂದು ಉಡುಪಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಕರೊನಾ ನಿಯಮಾವಳಿಗಳನ್ನು ಪಾಲಿಸಿ, ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಜಿಮ್ ಮಾತ್ರ ಇನ್ನೂ ತೆರೆದಿಲ್ಲ. ಕ್ರೀಡಾಂಗಣ ಪ್ರವೇಶಿಸುವ ಪ್ರತಿಯೊಬ್ಬರಿಗೂ ಸ್ಯಾನಿಟೈಸ್ ಮಾಡುವುದರ ಜತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಸರ್ಕಾರ ಅನುಮತಿ ನೀಡಿದರೆ ಮಾತ್ರ ಕ್ರೀಡಾಕೂಟ ಆಯೋಜಿಸಲಾಗುವುದು.

- ಪ್ರದೀಪ್ ಡಿಸೋಜ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ

ಅಥ್ಲೆಟಿಕ್ಸ್‌ಗೆ ಸಂಬಂಧಿಸಿದ ಕೆಲವೊಂದು ಕ್ರೀಡಾಪಟುಗಳು ಭಯದ ನಡುವೆಯೂ ಪ್ರಸ್ತುತ ಮೈದಾನಕ್ಕೆ ತರಬೇತಿಗೆ ಬರುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳೇ ಅಧಿಕ. ಭಾರತೀಯ ಅಥ್ಲೆಟಿಕ್ ಅಸೋಸಿಯೇಶನ್ ಈ ವರ್ಷಕ್ಕೆ ಸಂಬಂಧಿಸಿದ ವೇಳಾಪಟ್ಟಿ ಬಿಡುಗಡೆಗೊಳಿಸಿದ್ದರೂ, ಆಯೋಜನೆ ಸುಲಭವಲ್ಲ. ಈ ಸಾಲಿನ ಕ್ರೀಡಾಕೂಟಗಳು ರದ್ದುಗೊಂಡರೂ ಅಚ್ಚರಿಯಿಲ್ಲ.

- ಡಾ.ವಸಂತ ಕುಮಾರ್, ಅಥ್ಲೆಟಿಕ್ ತರಬೇತುದಾರ