ಹೊನ್ನಾವರ: ತಾಲೂಕಿನ ಮಾವಿನಹೊಳೆ ಸಮೀಪ ಕ್ಷುಲ್ಲಕ ಕಾರಣಕ್ಕೆ ಅನ್ಯ ಕೋಮಿನ ಯುವಕನೊಬ್ಬ ಇನ್ನೊಬ್ಬ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಗುರುವಾರ ನಡೆದಿದೆ.
ಕುದ್ರಗಿಯ ವಿವೇಕ ನಾಯ್ಕ ಎಂಬುವವನಿಗೆ ಸಂಶಿಯ ಅದ್ನಾನ್ ಶೇಖ್ ಎಂಬಾತ ಚಾಕು ಇರಿದು ಹಲ್ಲೆ ನಡೆಸಿದ ಕುರಿತು ದೂರು ದಾಖಲಾಗಿದೆ.
ಮಾವಿನಹೊಳೆ ಸಮೀಪ ದ್ವಿಚಕ್ರ ವಾಹನ ಚಲಾಯಿಸುವ ವಿಷಯದಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿ ವಿಕೋಪಕ್ಕೆ ತಿರುಗಿ ಚಾಕು ಇರಿತಕ್ಕೆ ಕಾರಣವಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಜಮಾವಣೆಗೊಂಡಿದ್ದರು. ಗಾಯಗೊಂಡ ಯುವಕನನ್ನು ಸ್ಥಳೀಯರ ವಾಹನದ ಮೂಲಕ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಅದ್ನಾನ್ ಶೇಖ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯ ಮುಂದೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾವಣೆಗೊಂಡು ಆಗ್ರಹಿಸಿದರು.