ಹೆಬ್ಬಗೋಡಿಯ ತಿರುಪಾಳ್ಯಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ನಾಗೇಶ್, ಡಿವೈಎಸ್‌ಪಿ ಮೋಹನ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. 
ಜಿಲ್ಲೆ

ರೌಡಿಶೀಟರ್‌ನಿಂದ ಚಾಕು ಇರಿತ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಕೃತ್ಯ

ಆನೇಕಲ್: ಗ್ರಾಮದ ಮಧ್ಯೆ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದ ರೌಡಿಶೀಟರ್‌ನನ್ನು ಪ್ರಶ್ನಿಸಿದ ಮಹಿಳೆ ಹಾಗೂ ಆಕೆಯ ಸಹೋದರನಿಗೆ ಚಾಕುವಿನಿಂದ ಇರಿಯಲಾಗಿದೆ.

ಹೆಬ್ಬಗೋಡಿ ತಿರುಪಾಳ್ಯದ ಮಂಜುಳಾ ಹಾಗೂ ವಿಶ್ವನಾಥ್ ಚಾಕು ಇರಿತಕ್ಕೆ ಒಳಗಾದವರು. ರೌಡಿಶೀಟರ್ ವಿಜಿ ಆರೋಪಿ. ತಿರುಪಾಳ್ಯದ ರೌಡಿಶೀಟರ್ ವಿಜಿ ಹುಟ್ಟುಹಬ್ಬದ ನೆಪದಲ್ಲಿ ಹುಡುಗರನ್ನು ಸೇರಿಸಿಕೊಂಡು ಗ್ರಾಮದ ಮಧ್ಯೆ ಪಾರ್ಟಿ ಆಯೋಜಿಸಿದ್ದಲ್ಲದೆ ಧ್ವನಿವರ್ಧಕ ಹಾಕಿ ಕಿರುಚಾಟ, ಗದ್ದಲ ಸೃಷ್ಟಿಸಿದ್ದ. ಇದರಿಂದ ಕಿರಿಕಿರಿಗೊಂಡ ಪಕ್ಕದ ಮನೆಯ ಮಂಜುಳಾ ಎಂಬುವವರು ರೌಡಿಶೀಟರ್‌ನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರೌಡಿಶೀಟರ್ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಚಾಕುವಿನಿಂದ ಮೂರು ಬಾರಿ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಈ ವೇಳೆ ಅಡ್ಡ ಬಂದ ಮಂಜುಳಾ ಸಹೋದರ ವಿಶ್ವನಾಥ್‌ಗೂ ಚಾಕುವಿನಿಂದ ಇರಿದು, ಬಳಿಕ ಲಾಂಗ್ ಹಿಡಿದು ಅಡ್ಡಾಡಿ, ಯಾರಾದರೂ ಅಡ್ಡ ಬಂದರೆ ಕೊಲೆ ಮಾಡುವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ದಾಖಲು: ಗಾಯಾಳು ಮಂಜುಳಾ ಹಾಗೂ ವಿಶ್ವನಾಥ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿ ಆತಂಕ:ಗ್ರಾಮದಲ್ಲಿ ನಾನು ಓಡಾಡುವಾಗ ಅಡ್ಡ ಬಂದರೆ ಸಿಕ್ಕಸಿಕ್ಕವರನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ವಿಜಿ, ಶನಿವಾರ ರಾತ್ರಿ ತಿರುಪಾಳ್ಯದಲ್ಲಿ ಭಾರಿ ಆತಂಕ ಸೃಷ್ಟಿಸಿದ್ದು, ರೌಡಿಶೀಟರ್‌ನಿಂದ ಈ ಭಾಗದಲ್ಲಿ ಸಾಕಷ್ಟು ತೊಂದರೆ ಆಗುತ್ತಿದ್ದು, ಪೊಲೀಸರು ದುರುಳರಿಗೆ ಪಾಠ ಕಲಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.