ಜಿಲ್ಲೆ

ಬಾಟಲಿಯಿಂದ ತಂದೆಗೇ ತಿವಿದ

Dakshina Kannada

ಕಾರ್ಕಳ: ನಂದಳಿಕೆಯ ಗೋಳಿಕಟ್ಟೆ ಎಂಬಲ್ಲಿ ಮಗನೇ ತಂದೆಯ ಹೊಟ್ಟೆಗೆ ಗಾಜಿನಿಂದ ತಿವಿದು ಗಾಯಗೊಳಿಸಿದ್ದಾನೆ.

ಗೋಳಿಕಟ್ಟೆಯ ವಿಶ್ವನಾಥ (63) ಘಟನೆಯಲ್ಲಿ ಗಾಯಗೊಂಡವರು. ಅವರ ಮಗ ಮಂಜುನಾಥ (45) ಪ್ರಕರಣದ ಆರೋಪಿ.

ಹೆಂಡತಿ, ಮಕ್ಕಳಿಂದ ದೂರವಾಗಿರುವ ಮಂಜುನಾಥ, ಎರಡು ವರ್ಷಗಳಿಂದ ಕೆಲಸಕ್ಕೆ ಹೋಗದೆ ತಂದೆಗೆ ಸೇರಿದ ಗೋಳಿಕಟ್ಟೆಯ 5 ಸೆಂಟ್ಸ್ ಕಾಲನಿಯ ಮನೆಯಲ್ಲಿ ವಾಸವಾಗಿದ್ದು, ತಂದೆ-ತಾಯಿ ಸಂಪಾದನೆಯಲ್ಲಿಯೇ ಜೀವನ ಸಾಗಿಸುತ್ತಿದ್ದ. ತಂದೆ - ಮಗನ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಶುಕ್ರವಾರ ಸಾಯಂಕಾಲ ಮತ್ತೆ ಅವರಿಬ್ಬರಲ್ಲಿ ಜಗಳ ಏರ್ಪಟ್ಟಿದೆ. ತಂದೆಗೆ ಕಾಲಿನಿಂದ ತುಳಿದು ನೆಲಕ್ಕೆ ಕೆಡವಿದ ಮಂಜುನಾಥ ತನ್ನ ಕೈಯಲ್ಲಿ ಇದ್ದ ಬಾಟಲಿಯಿಂದ ಇರಿದು ಗಾಯಗೊಳಿಸಿದ್ದಾನೆ.

ತೀವ್ರ ರಕ್ತಸ್ರಾವಗೊಂಡು ಬಿದ್ದುಕೊಂಡಿದ್ದ ವಿಶ್ವನಾಥ ಅವರನ್ನು ಪತ್ನಿ ಹಾಗೂ ಅಳಿಯ ವಾಹನವೊಂದರಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.