ಕಾಗವಾಡ: ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದರೂ ಕೂಡ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಹಾಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಆದಷ್ಟು ಬೇಗ ಜಾತಿ ಪ್ರಮಾಣ ಪತ್ರ ನೀಡುವಂತೆ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಕಾಗವಾಡ ತಾಲೂಕು ತಳವಾರ ಪರಿವಾರ ಸಮಾಜ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ತಾಲೂಕು ತಳವಾರ ಪರಿವಾರ ಸಮಾಜ ಹೋರಾಟ ಸಮಿತಿ ಅಧ್ಯಕ್ಷ ಭಗವಂತ ತಳವಾರ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರವು ತಳವಾರ ಮತ್ತು ಪರಿವಾರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಗೆಜೆಟ್ ಪಾಸ್ ಮಾಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರೂ ಕೂಡ ರಾಜ್ಯ ಸರ್ಕಾರವು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಕೆಲ ರಾಜಕಾರಣಿಗಳ ಕುತಂತ್ರದಿಂದ ನಮಗೆ ಅನ್ಯಾಯವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಮಗೆ ತಾರತಮ್ಯ ಮಾಡಲಾಗುತ್ತಿದೆ. ಹಾಗಾಗಿ, ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದರು.
ಮುಖಂಡ ಸುರೇಶ ಕೋಳಿ ಮಾತನಾಡಿ, ರಾಜ್ಯಾದ್ಯಂತ ಇರುವ ಸುಮಾರು 40 ಲಕ್ಷ ತಳವಾರ ಮತ್ತು ಪರಿವಾರ ಸಮಾಜದವರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಮನವಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕೆ ತಂದು ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ದೊರೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಮಾರುತಿ ಸನದಿ, ಅಪ್ಪಾಸಾಬ ಸನದಿ, ಸುರೇಶ ಕೋಳಿ, ರಮೇಶ ಕೋಳಿ, ಪಿಂಟು ಕೋಳಿ, ಲಕ್ಷ್ಮಣ ಕೋಳಿ, ಅಜಿತ ಕೋಳಿ, ಎಂ.ಟಿ.ತಳವಾರ ಇತರರು ಇದ್ದರು.