ತಿ.ನರಸೀಪುರ: ತಾಲೂಕಿನ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಸಿಬಿಎಸ್‌ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದೊರಕಿದೆ.
ಸೆಂಟ್ ಮೇರಿಸ್ ಇಂಗ್ಲಿಷ್ ಶಾಲೆಯು ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಕಳೆದ ಮೂರು ವರ್ಷಗಳಿಂದಲೂ ಶೇ.100 ರಷ್ಟು ಫಲಿತಾಂಶ ಪಡೆಯುತ್ತ ಬರುತ್ತಿದೆ. ಪರೀಕ್ಷೆಗೆ ಹಾಜರಾದ 92 ವಿದ್ಯಾರ್ಥಿಗಳ ಪೈಕಿ, 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. 41 ವಿದ್ಯಾರ್ಥಿಗಳು ಪ್ರಥಮ, 39 ವಿದ್ಯಾರ್ಥಿಗಳು ದ್ವಿತೀಯ ಹಾಗೂ 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಆರ್.ಗೋವಿಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಆರ್.ಅಪೇಕ್ಷಾ ಶೇ.90 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ, ನಿಮ್ರಸುರೂರ್, ಎಂ.ಅನುಶ್ರೀ, ಬಿ.ಯಶಿಕಾ ತಲಾ ಶೇ.88 ರಷ್ಟು ಅಂಕ ಪಡೆದಿದ್ದಾರೆ. ಎಂ.ಬಿ.ಭುವನ್, ಎಂ.ಸಿಂಚನಾ ತಲಾ ಶೇ.87 ಹಾಗೂ ಎಂ.ಎಸ್.ಅನ್ನಪೂರ್ಣ, ಸಹನಾ, ಸೃಷ್ಟಿ ತಲಾ ಶೇ.86 ಅಂಕ ಪಡೆಯಾಗಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.