ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೂ ನಿಯಂತ್ರಿಸುವ ಮೂಲಕ ಸಾವು ನೋವು ಹೆಚ್ಚಾಗದಂತೆ ತಡೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಇದೀಗ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೇಂಟ್ ಜಾನ್ ಆಸ್ಪತ್ರೆಯಲ್ಲಿ 200 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಆಸ್ಪತ್ರೆ ಆಡಳಿತ ಮಂಡಳಿಯಿಂದ ಒಪ್ಪಿಗೆ ಪತ್ರ ಸ್ವೀಕರಿಸಿದ ನಂತರ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಕರೋನಾ ಸೋಂಕು ತಡೆಗಟ್ಟಲು ಸರ್ಕಾರ ಹಾಗೂ ಬಿಬಿಎಂಪಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಾದರೂ ಪರಿಸ್ಥಿತಿ ನಿಭಾಯಿಸಲು ಸಿದ್ಧವಾಗಿದ್ದೇವೆ. ಸೋಂಕಿತರು ಮತ್ತು ಶಂಕಿತರಿಗೆ ಪ್ರತ್ಯೇಕ ಐಸೋಲೇಶನ್ ವಾರ್ಡ್ ನಿರ್ವಿುಸಲಾಗಿದೆ. ಅಧಿಕಾರಿಗಳಿಗೂ ಕರೋನ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.
ಮೇಯರ್ ಗೌತಮ್ ಕುಮಾರ್, ಆಯುಕ್ತ ಅನಿಲ್ಕುಮಾರ್, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಸೇಂಟ್ ಜಾನ್ಸ್ ಆಸ್ಪತ್ರೆ ನಿರ್ದೇಶಕ ಡಾ. ಪೌಲ್ ಪರತಜಮ್ ಉಪಸ್ಥಿತರಿದ್ದರು.
ಸಹಾಯವಾಣಿಗೆ ಚಾಲನೆ: ಕರೊನಾ ಸೋಂಕಿನ ಲಕ್ಷಣಗಳು, ಆರೋಗ್ಯ ಸಮಸ್ಯೆ ಕುರಿತ ಮಾಹಿತಿಯನ್ನು ವೈದ್ಯರಿಗೆ ಕರೆ ಮಾಡಿ ಪಡೆಯುವ ಟೆಲಿ ಕನ್ಸಲ್ಟೇಷನ್ ಸಹಾಯವಾಣಿಗೆ ಬುಧವಾರ ಚಾಲನೆ ನೀಡಲಾಗಿದೆ. 080-66744788 ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಹಾಗೂ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಟೆಲಿಕನ್ಸಲ್ಟೇಷನ್ ಸೇವೆ ಲಭ್ಯವಿರಲಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.