ಜಿಲ್ಲೆ

ಕ್ರೀಡಾಕೂಟಕ್ಕೆ ವಿವಿ ಬ್ರೇಕ್ ! ; ಕರೊನಾ ನೆಪ ಮಾಡಿಕೊಂಡು ಚಟುವಟಿಕೆ ಸ್ಥಗಿತ ; ಕ್ರೀಡಾಪಟುಗಳಿಗೆ ಅನ್ಯಾಯ

Tumakuru

ತುಮಕೂರು : ತುಮಕೂರು ವಿವಿ ಕರೊನಾ ಸಂಕಷ್ಟದ ಸಮಯದಲ್ಲಿ ಸ್ಥಗಿತ ಮಾಡಿದ್ದ ಕ್ರೀಡಾ ಚಟುವಟಿಕೆಗಳಿಗೆ ಮರುಚಾಲನೆ ನೀಡದಿರುವುದು ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯ ಮಾಡಿದಂತಾಗಿದೆ.

ಯುಜಿಸಿ ಶ್ರೇಣಿಯ ವೇತನ ಪಡೆಯುವ ಕ್ರೀಡಾ ನಿರ್ದೇಶಕರಿದ್ದರೂ ವಿವಿಯಲ್ಲಿ ಚಟುವಟಿಕೆ ನಡೆದಿಲ್ಲ. ವಿವಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾ ಪ್ರತಿಭೆಗಳು ಸೂಕ್ತ ಪ್ರೋತ್ಸಾಹವಿಲ್ಲದೆ ಕಮರಿ ಹೋಗುತ್ತಿವೆ. ಅಂತರಕಾಲೇಜು, ದಕ್ಷಿಣವಲಯ ಕ್ರೀಡಾಕೂಟಗಳಿಗೆ ರಾಜ್ಯದ, ಹೊರ ರಾಜ್ಯದ ವಿವಿಗಳಲ್ಲಿ ಚಾಲನೆ ನೀಡಲಾಗಿದ್ದರೂ ತುಮಕೂರು ವಿವಿ ಉದಾಸೀನ ಮಾಡುತ್ತಿರುವುದು ಕ್ರೀಡಾಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಶಾಲಾ-ಕಾಲೇಜುಗಳಲ್ಲಿ ಪಠ್ಯದಷ್ಟೇ ಕ್ರೀಡೆಗೂ ಆದ್ಯತೆ ನೀಡಬೇಕು ಎಂಬ ಮಾತು ಮಾತಾಗಿಯೇ ಉಳಿದಿದೆ, ಈ ನಡುವೆ ಕರೊನಾ ಕೂಡ ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದನ್ನೇ ನೆಪಮಾಡಿಕೊಂಡ ವಿವಿ ಕ್ರೀಡಾ ವಿಭಾಗ ಎಲ್ಲ ಚಟುವಟಿಕೆ ಆರಂಭವಾಗಿದ್ದರೂ ಸುಮ್ಮನಿದೆ.

ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿ ಪುಟ್ಬಾಲ್, ವಾಲಿಬಾಲ್, ಕಬಡ್ಡಿ, ಹಾಕಿ, ಕುಸ್ತಿ, ಖೋಖೋ, ಅಥ್ಲೆಟಿಕ್ ಹಾಗೂ ರೈಫಲ್ ಅಸೋಸಿಯೇಷನ್ ಪದಾಧಿಕಾರಿಗಳು ವಿವಿಗೆ ಮನವಿ ಸಲ್ಲಿಸಿದ್ದಾರೆ.

ನ್ಯಾಕ್ ಕಮಿಟಿ ಬಂದರಷ್ಟೇ ಮೈದಾನ! : ನಗರದ ತುಮಕೂರು ವಿವಿ ಸುಸಜ್ಜಿತ ಆಟದ ಮೈದಾನ ಹೊಂದಿದೆ, ಇದರಲ್ಲಿ ಸ್ವಲ್ಪ ಭಾಗವನ್ನು ಅಪರೂಪಕ್ಕೆ ನಗರಕ್ಕೆ ಬರುವ ಗಣ್ಯರ ಹೆಲಿಕಾಪ್ಟರ್ ಇಳಿಯಲು ಡಾಂಬರು ಹಾಕಿ ಹಾಳುಗೆಡವಲಾಗಿದೆ. ಇನ್ನು ಉಳಿದಿರುವ ಭಾಗದಲ್ಲಿ ಕ್ರೀಡೆಗೆ ಅಗತ್ಯವಾಗಿರುವ ಮೈದಾನಗಳು ಆಗಾಗ್ಗೆ ನಿರ್ಮಾಣವಾಗುತ್ತವೆ, ಜತೆಗೆ ಕೆಲವೇ ದಿನದಲ್ಲಿ ಮಾಯವೂ ಆಗುತ್ತಿವೆ. ವಿವಿ ಕಾಲೇಜುಗಳಿಗೆ ನ್ಯಾಕ್ ಕಮಿಟಿ ಭೇಟಿ ನೀಡುವ ಸಂದರ್ಭದಲ್ಲಿ ಮೈದಾನಗಳಿಗೆ ಬಣ್ಣ ಬಳಿದು, ಶುಚಿಗೊಳಿಸುವ ಕ್ರೀಡಾ ವಿಭಾಗ ವಿದ್ಯಾರ್ಥಿಗಳಿಗೆ ಆಡಲು ನೀಡಿದ್ದು ಕಡಿಮೆ. ಈ ಬಗ್ಗೆಯೂ ವಿವಿ ಆಡಳಿತ ಮಂಡಳಿ ಗಂಭೀರವಾದ ಕ್ರಮಕೈಗೊಳ್ಳಬೇಕು ಎಂಬ ಕೂಗು ಎದ್ದಿದೆ.

ನಾಲ್ಕು ವರ್ಷದಿಂದ ತುಮಕೂರು ವಿವಿ ಕ್ರೀಡಾ ಚಟುವಟಿಕೆಯನ್ನೇ ನಡೆಸಿಲ್ಲ, ಪ್ರತಿವರ್ಷ ವಿದ್ಯಾರ್ಥಿಗಳಿಂದ ಕ್ರೀಡಾ ಶುಲ್ಕ ವಸೂಲಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲೆಡೆ ಕ್ರೀಡಾ ಚಟುವಟಿಕೆ ನಡೆಯುತ್ತಿದ್ದರೂ ಇಲ್ಲಿನ ವಿದ್ಯಾರ್ಥಿಗಳಿಗೆ ಅವಕಾಶದಿಂದ ವಂಚಿಸಲಾಗಿದೆ. ಕೂಡಲೇ ಕ್ರೀಡಾ ಚಟುವಟಿಕೆ ಆರಂಭಿಸಬೇಕು. ಟಿ.ಎಂ.ಅನಿಲ್, ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಅಂತರ ಕಾಲೇಜು ಕ್ರೀಡಾಕೂಟಗಳನ್ನು ನಡೆಸಲು ಸಾಧ್ಯವಾಗಿಲ್ಲ, ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿಕೊಂಡು ಕ್ರೀಡಾಕೂಟ ಆಯೋಜಿಸಲು ವಿವಿ ನಿರ್ಧರಿಸಿದ್ದು, ಹೊಸ ಕ್ರೀಡಾ ನಿರ್ದೇಶಕರನ್ನು ನೇಮಿಸಲಾಗಿದೆ. ಪ್ರೊ.ಶಿವಚಿತ್ತಪ್ಪ ಕುಲಸಚಿವ, ತುಮಕೂರು ವಿವಿ