- ಶನಿವಾರಸಂತೆ : ಸಮೀಪದ ಅಂಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಅನುಮತಿ ನೀಡಿದೆ. ಇದರೊಂದಿಗೆ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಅನುಮತಿಯೂ ದೊರಕಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭೋತ್ಸವವ ಅಂಗವಾಗಿ ‘ಮಕ್ಕಳ ಕಲರವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪುಟಾಣಿಗಳಿಗೆ ಶಾಲಾ ಶಿಕ್ಷಕರು, ಗ್ರಾಪಂ ಮತ್ತು ಎಸ್‌ಡಿಎಂಸಿ ಸದಸ್ಯರು ಹೂ ಗುಚ್ಛ ನೀಡಿ ಸ್ವಾಗತಿಸಿದರು.
- ನಂತರ ಮಾತನಾಡಿದ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್, ಶಾಲಾ ಶಿಕ್ಷಣ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರಾಮೀಣ ಪ್ರದೇಶದ ಆಯ್ದ ಕೆಲ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಉನ್ನತೀಕರಣಗೊಳಿಸಲು ಅನುಮತಿ ನೀಡಿರುವುದು ಉತ್ತಮ ಬೆಳವಣಿಗೆ ಎಂದರು. ಕಾಲದ ಸ್ಥಿತಿಗೆ ತಕ್ಕಂತೆ ಶಾಲೆಗೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಯನ್ನೂ ಆರಂಭಿಸಲು ಅಧಿಕೃತ ಅನುಮತಿ ನೀಡಿರುವುದು ಈ ಭಾಗದ ಗ್ರಾಮೀಣರಿಗೆ ಅನುಕೂಲವಾಗಿದೆ ಎಂದರು. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
- ಆಲೂರು ಸಿದ್ದಾಪುರ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಮೋಹನ್, ಶಾಲಾ ಪಿಟಿಎ ಅಧ್ಯಕ್ಷ ಚಂದ್ರಶೇಖರ್, ಹಿರಿಯ ವಿದ್ಯಾರ್ಥಿ ಹೇಮಂತ್‌ಕುಮಾರ್, ಶಿಕ್ಷಕರಾದ ಎಲಿಯಮ್ಮ, ಯೋಗೇಶ್ವರಿ, ಅಭಿಲಾಷಾ, ಪಾಲಕರು ಮತ್ತು ಗ್ರಾಮಸ್ಥರು ಹಾಜರಿದ್ದರು. ಶಾಲೆಯಲ್ಲಿ ಎಲ್‌ಕೆಜಿಗೆ 18 ಮತ್ತು ಯುಕೆಜಿ ತರಗತಿಗೆ 16 ಮಕ್ಕಳು ದಾಖಲಾಗಿದ್ದಾರೆ.