ಜಿಲ್ಲೆ

ಬಿಹಾರ ಮೂಲದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್‌

 ಶಿರಸಿ: ಇಲ್ಲಿನ ಐದು ವೃತ್ತದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ಗೆ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಬಿಹಾರ ಮೂಲದ ಹಾಲಿ ಇಲ್ಲಿನ ಟಿಪ್ಪುನಗರದ ಮಹಮ್ಮದ್ ಇಸ್ಲಾಂ ಹಾಗೂ ಸಾಹಿರಾ ಬಾನು ದಂಪತಿಯ ಪುತ್ರಿ ಶಗುಫ್ತಾ ಅಂಜುಮ್, ಟ್ಯೂಷನ್ ಪಡೆಯದೇ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ವಿಷಯವನ್ನು ಅಧ್ಯಯನ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. ಈಕೆಯ ತಂದೆ ಮೊಹಮ್ಮದ್ ಇಸ್ಲಾಂ ಮಸೀದಿಯಲ್ಲಿ ಮೌಲ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಶಿರಸಿಯಲ್ಲಿ ಪೂರೈಸಿದ ಬಳಿಕ ಕುಟುಂಬ ಸಮೇತವಾಗಿ ಬಿಹಾರದ ಹುಟ್ಟೂರಿಗೆ ತೆರಳಿದ್ದರು. ಅಲ್ಲಿಯೇ 6 ಮತ್ತು 7 ನೇ ತರಗತಿ ಪೂರೈಸಿರುವ ಶಗುಪ್ತ, ಬಳಿಕ ಕುಟುಂಬದೊಂದಿಗೆ ವಾಪಸ್ ಶಿರಸಿಗೆ ಬಂದಿದ್ದಾರೆ. ಇಲ್ಲಿಯ ಶಾಲೆಯಲ್ಲಿಯೇ ಕನ್ನಡ ಕಲಿತು ನಿರರ್ಗಳವಾಗಿ ಮಾತನಾಡುತ್ತಾಳೆ.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಅತ್ಯಂತ ಖುಷಿ ತಂದಿದೆ. ನನ್ನ ವಿದ್ಯಾಭ್ಯಾಸಕ್ಕೆ ಶಿಕ್ಷಕರು, ಪಾಲಕರು ಬೆಂಬಲವಾಗಿ ನಿಂತಿದ್ದಾರೆ. ಅಂದಿನ ವಿಷಯವನ್ನು ಅಂದೇ ಓದುತ್ತಿದ್ದೆ. ಎಸ್.ಎಸ್.ಎಲ್.ಸಿಯ ಆರಂಭದಲ್ಲಿ 2 ತಾಸು ಓದುತ್ತಿದ್ದೆ. ಯಾವುದೇ  ಒತ್ತಡಕ್ಕೆ ಒಳಗಾಗದೇ ಓದಿದ್ದನ್ನು ಸರಿಯಾಗಿ ಅರ್ಥಮಾಡಿಕೊಂಡು ನೆನಪಿಟ್ಟುಕೊಳ್ಳುತ್ತಿದ್ದೆ ಎಂದಿದ್ದಾಳೆ.  ನವೆಂಬರ್, ಡಿಸೆಂಬರ್, ಜನೆವರಿ, ಫೆಬ್ರುವರಿ, ಮಾರ್ಚ್ ತಿಂಗಳಿನಲ್ಲಿ ಪ್ರತಿನಿತ್ಯ 8 ಗಂಟೆಗಳು ಓದಿರುವುದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡಳು.
ವೈದ್ಯೆಯಾಗುವ ಕನಸು
 ಭವಿಷ್ಯದಲ್ಲಿ ವೈದ್ಯೆ ಆಗಬೇಕು ಎಂಬ ಕನಸು ಹೊತ್ತಿದ್ದೇನೆ. ಬಡವರಿಗೆ ಈ ಮೂಲಕ ಸೇವೆ ಮಾಡಬೇಕು ಎಂಬುದು ನನ್ನ ಬಯಕೆ ಎಂದಿದ್ದಾಳೆ.
 ವಿದ್ಯಾರ್ಥಿಯ ಸಾಧನೆಗೆ ಡಿಡಿಪಿಐ ಪಿ. ಬಸವರಾಜು, ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯನ್ನು ಸನ್ಮಾನಿಸಿದ್ದಾರೆ.