ಜಿಲ್ಲೆ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪೂರಕ ಕೈಪಿಡಿ ಸದುಪಯೋಗಪಡಿಸಿಕೊಳ್ಳಿ

ಸವಣೂರ: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ ಉತ್ತಮ ಪ್ರತಿಭೆಗಳಿವೆ. ಉತ್ತಮ ಫಲಿತಾಂಶಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಿಇಒ ಎಂ.ಎಫ್. ರ್ಬಾ ತಿಳಿಸಿದರು.

ಪಟ್ಟಣದ ಬಿಆರ್​ಸಿ ಕಚೇರಿಯಲ್ಲಿ ಕುಮಾರಿ ಗಿರಿಜಾಬಾಯಿ ಶಂಕರರಾಜ ಪಾಳೇಗಾರ ಎಜುಕೇಶನಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಸುಮಾರು 800 ವಿದ್ಯಾರ್ಥಿಗಳಿಗೆ ಪಾಳೇಗಾರ ಎಜುಕೇಶನಲ್ ಟ್ರಸ್ಟ್ ವತಿಯಿಂದ ಪರೀಕ್ಷೆಗೆ ಪ್ರಯತ್ನಶೀಲ ವಿದ್ಯಾರ್ಥಿಗಳಿಗೆ ಪೂರಕ ಕೈಪಿಡಿ ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಸಾಧನೆಗೆ ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಆರ್​ಸಿ ಎಂ.ಎನ್. ಅಡಿವೆಪ್ಪನವರ ಮಾತನಾಡಿ, ಪಾಳೇಗಾರ ಎಜುಕೇಶನಲ್ ಟ್ರಸ್ಟ್​ನಿಂದ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಪ್ರೌಢಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿರುವ ಪೂರಕ ಕೈಪಿಡಿ ಅತ್ಯಂತ ಉಪಯುಕ್ತವಾಗಿದೆ ಎಂದರು. ಪ್ರಾಚಾರ್ಯ ಸಿ.ಸಿ. ಪಾಟೀಲ, ರೇವತಿ ಪಾಟೀಲ, ಇತರರಿದ್ದರು.