ಜಿಲ್ಲೆ

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶಾಲೆಯಲ್ಲೇ ಪರೀಕ್ಷೆ!

Udupi

ಉಡುಪಿ: ಕೋವಿಡ್ ನಿಯಮಾವಳಿ ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದ ಶಾಲೆಯೊಂದರ ಮುಖ್ಯಶಿಕ್ಷಕರು, ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.

ಉಡುಪಿಯ ಕೊರಂಗ್ರಪಾಡಿ ಪರಿಸರದಲ್ಲಿರುವ ಖಾಸಗಿ ವಿದ್ಯಾಸಂಸ್ಥೆ, ಆನ್‌ಲೈನ್ ತರಗತಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳನ್ನು ಶುಕ್ರವಾರ ಶಾಲೆಗೆ ಕರೆಸಿ ಪರೀಕ್ಷೆ ನಡೆಸುತ್ತಿತ್ತು. ಶಾಲೆಯಲ್ಲಿ ಹತ್ತನೇ ತರಗತಿಯ ಸಮಾರು 20 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಮಕ್ಕಳನ್ನು ಮೂರು ಕೋಣೆಗಳಲ್ಲಿ ಸೇರಿಸಿ ಗೌಪ್ಯವಾಗಿ ಪರೀಕ್ಷೆ ನಡೆಸುತ್ತಿದ್ದರು. ಮಾಹಿತಿ ತಿಳಿದ ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಮನೆಗೆ ಕಳುಹಿಸಿ ಶಾಲೆಯ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವಂತೆ ಪೊಲೀಸರಿಗೆ ತಹಸೀಲ್ದಾರ್ ಆದೇಶಿಸಿದ್ದು, ಕೇಸು ದಾಖಲಾಗಿದೆ. ಶಾಲಾ ಮುಖ್ಯಶಿಕ್ಷಕಿ ಜುನೈದ ಸುಲ್ತಾನಾ ಅವರನ್ನು ವಿಚಾರಣೆ ನಡೆಸಿದಾಗ ಪಾಲಕರ ಒತ್ತಡದ ಮೇರೆಗೆ ತರಗತಿ ನಡೆಸಿದ್ದಾಗಿ ತಿಳಿಸಿರುವುದಾಗಿ ತಹಸೀಲ್ದಾರ್ ಹೇಳಿದ್ದಾರೆ. ಕಾಪು ಪೊಲೀಸ್ ಠಾಣೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.