ಜಿಲ್ಲೆ

ಎಸ್ಸೆಸ್ಸೆಲ್ಸಿ ಫಲಿತಾಂಶ : ಸೆಕ್ಯೂರಿಟಿ ಗಾರ್ಡ್ ಮಗಳ ಅದ್ವಿತೀಯ ಸಾಧನೆ

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರಿನ ವಿಜಯನಗರದ ಬಿಕೆಎಸ್ ವಿದ್ಯಾಭವನ ಪ್ರೌಢ ಶಾಲೆಯ ವಿದ್ಯಾರ್ಥಿನಿ ಎಸ್. ಜಾಹ್ನವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಮೂರನೇ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.

ಈಕೆ ನಗರದ ಜೆಎಸ್‌ಎಸ್ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಶಿವಕುಮಾರ್ ಹಾಗೂ ಗೃಹಿಣಿ ಪುಷ್ಪಲತಾ ದಂಪತಿ ಪುತ್ರಿಯಾಗಿದ್ದಾಳೆ. ಕಲಿಕೆಗೆ ಶಾಲೆಯಲ್ಲಿ ಉತ್ತಮ ವಾತಾವರಣ ದೊರೆಯಿತು. ಅದೇ ರೀತಿ ಮನೆಯಲ್ಲೂ ಉತ್ತಮ ಪ್ರೋತ್ಸಾಹ ದೊರೆಯಿತು. ಶಾಲೆಯಲ್ಲಿ ಶಿಕ್ಷಕರು ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ಸಾಧನೆ ತೋರಲು ಸಾಧ್ಯವಾಯಿತು. ಮೊದಲಿನಿಂದಲೂ ನಾನು ಕಲಿಕೆಯಲ್ಲಿ ಮುಂದೆ ಇದ್ದೇನೆ, ಎಸ್ಸೆಸ್ಸೆಲ್ಸಿಯಲ್ಲಿ ಹಿಂದೆ ಉಳಿಯಬಾರದು ಎಂಬ ಕಾರಣಕ್ಕೆ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿದ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶ ದೊರೆಯಿತು. ಈ ಫಲಿತಾಂಶ ತುಂಬಾ ಸಂತಸ ಉಂಟು ಮಾಡಿದೆ. ಕಷ್ಟಪಟ್ಟು ಓದಿಸಿದ ಅಪ್ಪ ಶಿವಕುಮಾರ್ ಅವರು ಸಾಕಷ್ಟು ಸಂತಸಗೊಂಡಿದ್ದಾರೆ ಎಂದು ಜಾಹ್ನವಿ ಸಂತಸ ಹಂಚಿಕೊಂಡರು.