ಜಿಲ್ಲೆ

151 ಶಾಲೆಗಳ ಫಲಿತಾಂಶ ಶೇ.50ಕ್ಕಿಂತ ಕಡಿಮೆ!

ಜಗದೀಶ ಹೊಂಬಳಿ ಬೆಳಗಾವಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಪ್ರತಿವರ್ಷ ಹಲವಾರು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದರೂ ಶೈಕ್ಷಣಿಕ ಪ್ರಗತಿ ಮಾತ್ರ ಗಗನ ಕುಸುಮವಾಗಿದೆ. ಈ ಸಾರಿಯೂ 151 ಸರ್ಕಾರಿ ಶಾಲೆಗಳ ಫಲಿತಾಂಶ ಶೇ.50ಕ್ಕಿಂತ ಕಡಿಮೆ ಆಗಿದೆ. ಇದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಅಸಮಾಧಾನಕ್ಕೂ ಕಾರಣವಾಗಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪೈಕಿ 151 ಶಾಲೆಗಳ ಫಲಿತಾಂಶ ಶೇ.50ಕ್ಕಿಂತ ಕಡಿಮೆ ಆಗಿದೆ. ಇದರಲ್ಲೇ 67 ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿವೆ. ಶ್ರೀನಗರ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬೆಳಗಾವಿ ತಾಲೂಕಿನ ಹಾಲಭಾವಿ ಮೊರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಸ್ಕೂಲ್, ಬೆಳಗಾವಿ ಕ್ಯಾಂಪ್‌ನ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಖಾನಾಪುರ ತಾಲೂಕಿನ ಮನಸಾಪುರ ಸೇಂಟ್ ಜೋಸೆಫ್ ಸ್ಕೂಲ್‌ಗಳು 100ಕ್ಕೆ 100 ಫಲಿತಾಂಶ ದಾಖಲಿಸಿವೆ.

ಶೇ.61.69ರಷ್ಟು ಫಲಿತಾಂಶ: ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 517 ಶಾಲೆ ಸೇರಿ ಒಟ್ಟಾರೆ ಶೇ.61.69ರಷ್ಟು ಫಲಿತಾಂಶ ದಾಖಲಾಗಿದ್ದು, ಇದು ಅಧಿಕಾರಿಗಳಿಗೂ ಸಮಾಧಾನ ತಂದಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಖಾಸಗಿ ಶಾಲೆಗಳು ಹೆಚ್ಚಿನ ಫಲಿತಾಂಶ ದಾಖಲಿಸಿವೆ. ಶೇ.90ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸಿದ 27ಕ್ಕೂ ಅಧಿಕ ಶಾಲೆಗಳು ಬಹುತೇಕ ಖಾಸಗಿ ಶಾಲೆಗಳೇ ಆಗಿವೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಫಲಿತಾಂಶದಲ್ಲಿ ಮತ್ತೆ ಹಿಂದೆ ಬಿದ್ದಿವೆ.

ಬೆಳಗಾವಿ ಗ್ರಾಮೀಣ ವಲಯ ಕೊನೆ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕು ಶೇ.67.89ರಷ್ಟು ಫಲಿತಾಂಶ ದಾಖಲಾಗಿದ್ದು, ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಸಚಿವರ ಕ್ಷೇತ್ರವಾಗಿರುವ ಬೆಳಗಾವಿ ಗ್ರಾಮೀಣ ಶೇ.54.74ರಷ್ಟು ಫಲಿತಾಂಶ ಪಡೆದು ಕೊನೆ ಸ್ಥಾನದಲ್ಲಿದೆ. ಬೆಳಗಾವಿ ನಗರ ಶೇ.66.56ರಷ್ಟು ಫಲಿತಾಂಶ ದಾಖಲಿಸಿ ದ್ವಿತೀಯ ಸ್ಥಾನದಲ್ಲಿದೆ. ಸವದತ್ತಿ ತಾಲೂಕಿನಲ್ಲಿ ಶೇ.63.33 ಫಲಿತಾಂಶ ದಾಖಲಾಗಿದ್ದು ತೃತೀಯ ಸ್ಥಾನದಲ್ಲಿದೆ. ಖಾನಾಪುರ ಶೇ.61.29, ಬೈಲಹೊಂಗಲ ಶೇ. 59.32, ರಾಮದುರ್ಗ ಶೇ.58.13ರಷ್ಟು ಫಲಿತಾಂಶ ದಾಖಲಿಸಿದ್ದು, ಕ್ರಮವಾಗಿ 4, 5 ಮತ್ತು 6ನೇ ಸ್ಥಾನದಲ್ಲಿವೆ.

8 ಶಾಲೆಗಳಿಗೆ ಶೂನ್ಯ ಫಲಿತಾಂಶ: ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ 74,435 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 28,532 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2 ಶಾಲೆಗಳು ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 6 ಶಾಲೆಗಳು ಫಲಿತಾಂಶ ಶೂನ್ಯ ಕಂಡಿವೆ.

ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು: ಬೈಲಹೊಂಗಲ ತಾಲೂಕಿನ ದೇವಲಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರೂಪಾ ಪಾಟೀಲ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಹಾಗೂ ಬೆಳಗಾವಿಯ ವಿದ್ಯಾರ್ಥಿನಿಯರಾದ ರೋಹಿಣಿ ಪಾಟೋಳಿ, ನೀಲಾಂಬಿಕಾ ಬುಬನಾಳೆ, ನಿಧಿ ಕಂಗ್ರಾಳಕರ, ಸೃಷ್ಟಿ ಪಡೋಲಕರ್ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್ ಗಳಿಸಿ ಜಿಲ್ಲೆಗೆ ಹೆಸರು ತಂದಿದ್ದು ಸಮಾಧಾನದ ಸಂಗತಿ.

ಅನುತ್ತೀರ್ಣ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವುದಕ್ಕೆ ವಿಶೇಷ ತರಗತಿ ನಡೆಸುತ್ತೇವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾಗುವಂತೆ ಕ್ರಮ ಕೈಗೊಳ್ಳುತ್ತೇವೆ. ಲೀಲಾವತಿ ಹಿರೇಮಠ, ಡಿಡಿಪಿಐ ಬೆಳಗಾವಿ