ಜಿಲ್ಲೆ

ಕಡಿಮೆ ಫಲಿತಾಂಶ ವಿಶೇಷ ನಿಗಾವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲೇ 3,187 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಅತ್ಯಂತ ದುಃಖದ ಸಂಗತಿ. ವರದಿ ಪ್ರಕಾರ ಸರ್ಕಾರಿ ಶಾಲೆಗಳ ಫಲಿತಾಂಶಕ್ಕಿಂತ ಅನುದಾನಿತ ಶಾಲೆಗಳ ಫಲಿತಾಂಶ ಕಡಿಮೆ ಇದೆ. ಆದ್ದರಿಂದ ಅನುದಾನಿತ ಶಾಲೆಗಳ ಕುರಿತು ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು. ಜತೆಗೆ ಆಡಳಿತಾಧಿಕಾರಿಗಳ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ಮತ್ತು ಜಿಲ್ಲಾಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲಿನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರು ತಮ್ಮ ಮಕ್ಕಳಂತೆ ಕಾಣಬೇಕು. ನಿಮ್ಮ ಮಕ್ಕಳ ಜೀವನ ರೂಪಿಸುವಲ್ಲಿ ನೀವು ಎಷ್ಟು ಮುಖ್ಯ ಪಾತ್ರ ವಹಿಸುತ್ತಿರೋ ಅಷ್ಟೇ ಪ್ರಮುಖವಾದ ಪಾತ್ರವನ್ನು ಶಾಲೆಗೆ ಬರುವ ವಿದ್ಯಾರ್ಥಿಗಳ ಜೀವನ ರೂಪಿಸಲು ಶ್ರಮ ವಹಿಸಬೇಕು ಎಂದು ತಿಳಿ ಹೇಳಿದರು.

ಹಿಂದಿನ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆ 19ನೇ ಸ್ಥಾನ ಗಳಿಸಿತ್ತು. ಆದರೆ ಕಳೆದ ವರ್ಷ 12ನೇ ಸ್ಥಾನ ಪಡೆದುಕೊಂಡಿದೆ. ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕರ ಪರಿಶ್ರಮದಿಂದ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 472 ಪ್ರೌಢಶಾಲೆಗಳಿವೆ. ಅದರಲ್ಲಿ ಸರ್ಕಾರಿ 251, ಅನುದಾನಿತ 92, ಅನುದಾನರಹಿತ 132 ಪ್ರೌಢಶಾಲೆಗಳಿವೆ. ಕಳೆದ ವರ್ಷದ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಫಲಿತಾಂಶ ಶೇ 66.14 ಇದ್ದರೆ, ಮಂಡ್ಯ ಜಿಲ್ಲೆ ಶೇ 69.26 ಪಡೆದಿದೆ. ಮೂರು ಹಂತದ ಪರೀಕ್ಷೆ ನಡೆಸಿದರೂ ಸಹ 2024-25ನೇ ಸಾಲಿನಲ್ಲಿ ಜಿಲ್ಲೆಯ 2,864 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಯೋಚಿಸಬೇಕಿರುವ ಸಂಗತಿ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಶೇ.40ಕ್ಕಿಂತ ಫಲಿತಾಂಶ ಬಂದಿರುವ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರನ್ನು ಕರೆಸಿ ಸಭೆ ನಡೆಸಬೇಕು. ಈಗಾಗಲೇ ಶೇ.40 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಕೊಟ್ಟಿರುವ ಎರಡು ಶಾಲೆಗಳಿವೆ. ಇವೆಲ್ಲವನ್ನೂ ಗಮನಿಸಿದರೆ ಶಿಕ್ಷಕರಲ್ಲಿ ಇಚ್ಛಾಶಕ್ತಿಯ ಕೊರತೆ ಕಾಣುತ್ತದೆ. ಮುಖ್ಯ ಶಿಕ್ಷಕರು ಸ್ವಹಿತಾಸಕ್ತಿ ವಹಿಸಿ ಸೂಕ್ತ ಜವಾಬ್ದಾರಿ ತೆಗೆದುಕೊಂಡು ಈ ಬಾರಿಯ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಬೇಕು. ಶಿಕ್ಷಕರಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೈಚೆಲ್ಲಿ ಕೂರುವಂತಿಲ್ಲ. ವ್ಯವಸ್ಥೆಗೆ ನಿಮ್ಮ ಮೇಲೆ ಭರವಸೆ ಇದೆ. ನಿಮ್ಮ ಮೇಲಿನ ಜವಾಬ್ದಾರಿ ಅರಿತು ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಿ. ಈ ಬಾರಿ ರಾಜ್ಯದಲ್ಲಿ 5ನೇ ಸ್ಥಾನದೊಳಗೆ ಸ್ಥಾನ ಪಡೆದುಕೊಳ್ಳುವಂತೆ ನೋಡಿಕೊಳ್ಳಿ ಎಂದರು.

ಕಳೆದ ವರ್ಷವೇ ನೋಡಲ್ ಅಧಿಕಾರಿಗಳಾಗಿ ಮಾಡಿ ಕೆಲವು ಶಾಲೆಗಳನ್ನು ದತ್ತು ಕೊಟ್ಟಿದ್ದೇವೆ. ಅದೇ ರೀತಿ ಈ ವರ್ಷವೂ ಸಹ ಆದೇಶ ಹೊರಡಿಸಲಾಗಿದೆ. ದತ್ತು ಶಾಲೆ ಪಡೆದಂತಹ ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ಶಾಲೆಗಳಿಗೆ ಭೇಟಿ ನೀಡಬೇಕು. ಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಫಲಿತಾಂಶ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇವೆಲ್ಲ ಮಾಡಿದರೆ ಖಂಡಿತ ಫಲಿತಾಂಶ ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ಶಾಲೆಗಳಲ್ಲಿ ಮಾನಸಿಕ ಒತ್ತಡ ಹಾಗೂ ನಕಾರಾತ್ಮಕ ಭಾವನೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ. ಪ್ರತಿ ಶಾಲೆಯ ಒಬ್ಬ ಶಿಕ್ಷಕರನ್ನು ಆಪ್ತ ಸಮಾಲೋಚಕರಾಗಿ ನೇಮಿಸಲಾಗುವುದು. ಅವರಿಗೆ ನುರಿತ ಮನೋವೈದ್ಯರಿಂದ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಮಕ್ಕಳಿಂದ ಫಲಿತಾಂಶ ಹೇಗೆ ಹೆಚ್ಚಿಸಬೇಕು ಎಂಬುದು ಶಿಕ್ಷಕರಿಗೆ ತಿಳಿದಿರುತ್ತದೆ. ಉಪವಿಭಾಗದ ಮಟ್ಟದಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಹೊಂದಿರುವ ಶಾಲೆಗಳು ಹೇಗೆ ತಮ್ಮ ಫಲಿತಾಂಶವನ್ನು ವೃದ್ಧಿಸಬಹುದೆಂದು ಕ್ರಿಯಾ ಯೋಜನೆ ಸಿದ್ಧಪಡಿಸಿ. ರಾಜ್ಯದಲ್ಲಿ ಅತಿ ಹೆಚ್ಚು ಭಾಷಾಭಿಮಾನ ಹಾಗೂ ಕನ್ನಡ ಮಾತನಾಡುವ ಜಿಲ್ಲೆಯಲ್ಲಿಯೇ 3,187 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅನುತ್ತೀರ್ಣಗೊಂಡಿರುವುದು ವಿಷಾದನೀಯ ಎಂದರು.

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಭಾಷಾ ವಿಷಯಗಳಿಗೂ ನೀಡಿ. ಈ ವರ್ಷ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪಾತ್ರ ತುಂಬಾ ದೊಡ್ಡದಿದೆ. 17,500ಕ್ಕೂ ಹೆಚ್ಚು ಮಕ್ಕಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಈ ವರ್ಷ 50,000 ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸುವ ಗುರಿ ಹೊಂದಿದ್ದೇವೆ. ಶಿಕ್ಷಣ ಇಲಾಖೆ ನಮ್ಮ ಇಲಾಖೆ ಇದ್ದಂತೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದರೆ ಫಲಿತಾಂಶವನ್ನು ಖಂಡಿತವಾಗಿಯೂ ಹೆಚ್ಚಿಸಬಹುದು. ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿ ಈ ವರ್ಷ ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸೋಣ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್ ಮಾತನಾಡಿ, ಈ ಬಾರಿ ಫಲಿತಾಂಶವನ್ನು ಉತ್ತಮ ಪಡಿಸಲು ವಿವಿಧ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕಲಿಕಾ ಹಂತದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ಮಾಡಿ, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಅವರಿಗೆ ನಿರಂತರ ಪರಿಹಾರ ಬೋಧನೆ, ವಿಶೇಷ ತರಗತಿ, ಪರೀಕ್ಷಾ ದೃಷ್ಟಿಯಿಂದ ಸಂಭವನೀಯ ಪ್ರಶ್ನೆಗಳು ಅಭ್ಯಾಸ ಮಾಡಿಸಲಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹಾದೇವ, ಸೌಭಾಗ್ಯಾ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜು, ವಿಷಯ ಪರಿವೀಕ್ಷಕ ಸಿದ್ದರಾಜು ಇತರರಿದ್ದರು. ಇದೇ ವೇಳೆ 2022-23 ಹಾಗೂ 2023-2024ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರಿಗೆ ಪ್ರಶಸ್ತಿ ಫಲಕ ನೀಡಲಾಯಿತು.