ಚಿತ್ರದುರ್ಗ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಕಂಡಿದ್ದು, 2026ರ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಒಂದಾಗಿರಬೇಕು ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಹೇಳಿದರು.
ನಗರದ ಡಯಟ್‌ನಲ್ಲಿ ಜಿಲ್ಲಾ ಮತ್ತು ತಾಲೂಕು ಹಂತದ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನಾಧಿಕಾರಿಗಳಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತು ಶಿಕ್ಷಕರ ದಿನಚರಿ ನಿರ್ವಹಣೆ ಕುರಿತು ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಫಲಿತಾಂಶದಲ್ಲಿ ಜಿಲ್ಲೆಯನ್ನು ಟಾಪ್‌ಟೆನ್‌ವೊಳಗೆ ತರಲು ಶೈಕ್ಷಣಿಕ ಅನುಷ್ಠಾನಾಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣವಾಗಿರುವ ಶಾಲೆಗಳನ್ನು ಪಟ್ಟಿ ಮಾಡಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯ ಪರಿಶೀಲಿಸಿ ಮಾರ್ಗದರ್ಶನ ಮಾಡಬೇಕು. ಫಲಿತಾಂಶ ಹೆಚ್ಚಿಸಲು ಇಲಾಖೆಯಿಂದ ನಿಗದಿಪಡಿಸಿರುವ 29 ಅಂಶಗಳ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಅಳವಡಿಸಿರುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ಅತಿಥಿ ಶಿಕ್ಷಕರು ಬೋಧನಾ ಕಾರ್ಯ ಮತ್ತು ಬೋಧನೇತರ ಚಟುವಟಿಕೆಗಳಲ್ಲಿ ಎಷ್ಟು ಅವಧಿ ತೊಡಗಿಸಿಕೊಂಡಿರುವುದರ ಕುರಿತು ಆ.4 ರಿಂದಲೇ ದಿನಚರಿ ನಿರ್ವಹಿಸಬೇಕು. ತಾಲೂಕು ಹಂತದಲ್ಲಿ ಸಿಆರ್‌ಪಿಗಳ ಸಭೆ ನಡೆಸಿ ಶಿಕ್ಷಕರು ದಿನಚರಿ ನಿರ್ವಹಿಸುವ ಕುರಿತು ತಾಲೂಕು ಹಂತದ ಅಧಿಕಾರಿಗಳು ಮಾರ್ಗದರ್ಶನ ಮಾಡಬೇಕು. ಡಯಟ್‌ನಿಂದ ಉಪನ್ಯಾಸಕರನ್ನು ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಯಾಗಿ ನೇಮಿಸಿ, ಪ್ರತಿ ತಿಂಗಳು ತಾಲೂಕು ಹಂತದ ಶಿಕ್ಷಕರ ದಿನಚರಿ ನಿರ್ವಹಣೆ, ಮಕ್ಕಳ ಕಲಿಕಾ ಪ್ರಗತಿ ಮಾಹಿತಿ ಒದಗಿಸಬೇಕೆಂದರು. ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಲಾಗುವುದು ಎಂದು ಸಿಇಒ ಹೇಳಿದರು.
ಸಿಟಿಇ ಸಹನಿರ್ದೇಶಕಿ ಎ. ಹನುಮಕ್ಕ, ಡಿಡಿಪಿಐ ಎಂ.ಆರ್. ಮಂಜುನಾಥ್, ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಪ.ಪೂ. ಶಿಕ್ಷಣ ಇಲಾಖೆ ಡಿಡಿ ಕೆ. ತಿಮ್ಮಯ್ಯ, ಪ್ರವಾಚಕರಾದ ಗುರುಪ್ರಸಾದ್, ಹನುಮಂತರಾಯಪ್ಪ, ಬಿಇಒ ಸೈಯದ್ ಮೋಸಿನ್, ಉಪನ್ಯಾಸಕರಾದ ಎಸ್.ಬಸವರಾಜು, ಪದ್ಮಾ ಇತರರು ಇದ್ದರು.