ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮಧುಗಿರಿ ಶೈಕ್ಷಣಿಕ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ತುಮಕೂರು 14ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಕಳೆದ ವರ್ಷ 11ನೇ ಸ್ಥಾನದಲ್ಲಿದ್ದ ಮಧುಗಿರಿ ಈ ವರ್ಷ ಮೂರನೇ ಸ್ಥಾನ ಪಡೆದಿದೆ. 2019ರಲ್ಲಿ 16ನೇ ಸ್ಥಾನ ಪಡೆದು ವ್ಯಾಪಕ ಟೀಕೆಗೆ ಗುರಿಯಾಗಿದ್ದ ತುಮಕೂರು ಎರಡು ಸ್ಥಾನ ಜಿಗಿದಿರುವುದಷ್ಟೇ ಸಮಾಧಾನ.
2018ರಲ್ಲಿ 10ನೇ ಸ್ಥಾನ, 2019ರಲ್ಲಿ 16ನೇ ಸ್ಥಾನಕ್ಕೆ ಕುಸಿದಿದ್ದ ತುಮಕೂರು ಜಿಲ್ಲೆ ಈ ವರ್ಷ ಬಿ ಶ್ರೇಣಿಯ ಜತೆಗೆ 14ನೇ ಸ್ಥಾನ ಪಡೆದಿದೆಯಾದರೂ ಶೈಕ್ಷಣಿಕ ಜಿಲ್ಲೆ ಎಂಬ ಹಣೆಪಟ್ಟಿಗೆ ಇದು ಸಾಕಾಗಿಲ್ಲ. 2018ರಲ್ಲಿ 5ನೇ ಸ್ಥಾನದಲ್ಲಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆ 2019ರಲ್ಲಿ 12ನೇ ಸ್ಥಾನಕ್ಕೆ ಜಾರಿತ್ತು. ಆದರೆ, ಈ ವರ್ಷ ಭರ್ಜರಿ ಸುಧಾರಣೆ ಕಂಡು ಎ ಶ್ರೇಣಿಯೊಂದಿಗೆ ಮೂರನೇ ಸ್ಥಾನ ಪಡೆದಿರುವುದು ಹೆಮ್ಮೆಯಾಗಿದೆ.
ಪ್ರಸಕ್ತ ವರ್ಷ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 23783 ವಿದ್ಯಾರ್ಥಿಗಳು ಕರೊನಾ ಆತಂಕದ ನಡುವೆಯೂ ಪರೀಕ್ಷೆ ಬರೆದಿದ್ದರು, 13205 ಬಾಲಕರು, 10508 ಬಾಲಕಿಯರು ಭವಿಷ್ಯದ ಮಹತ್ವದ ಘಟದ ಪರೀಕ್ಷೆ ಎದುರಿಸಿದ್ದರು. ತುಮಕೂರು ತಾಲೂಕು ಮಾತ್ರ ‘ಎ’ ಶ್ರೇಣಿ ಪಡೆದಿದ್ದು ಉಳಿದ ತಾಲೂಕುಗಳು ‘ಬಿ’ಗೆ ತೃಪ್ತಿಪಟ್ಟುಕೊಂಡಿವೆ. 190 ಶಾಲೆಗಳು ಎ ಶ್ರೇಣಿ, 167 ಶಾಲೆಗಳಿಗೆ ಬಿ ಹಾಗೂ 107 ಶಾಲೆಗಳು ಸಿ ಶ್ರೇಣಿ ಪಡೆದಿವೆ. ಜಿಲ್ಲೆಯಲ್ಲಿಯೂ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳು ಲಿತಾಂಶದಲ್ಲಿ ಚೇತರಿಕೆ ಕಂಡಿದ್ದಾರೆ.
2017ರಲ್ಲಿ ರಾಜ್ಯದಲ್ಲಿ 32ನೇ ಸ್ಥಾನ ಪಡೆದಿದ್ದು ತುಮಕೂರು ಜಿಲ್ಲೆಯ ಈವರೆಗಿನ ಕಳೆಪೆ ದಾಖಲೆ. ಕುಣಿಗಲ್ ಪಟ್ಟಣದ ಜ್ಞಾನಭಾರತಿ ಶಾಲೆಯ ಜಿ.ಎಂ.ಮಹೇಶ್ 624 ಅಂಕ ಪಡೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ, ಜಿಲ್ಲೆಗೆ ಪ್ರಥಮ ಎನಿಸಿಕೊಂಡಿದ್ದು ಫಲಿತಾಂಶ ಮೊಬೈಲ್‌ಗೆ ಹೋಗಿರುವ ಕಾರಣದಿಂದ ಉಳಿದ ವಿದ್ಯಾರ್ಥಿಗಳ ಸಾಧನೆಯ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಮಂಗಳವಾರ ಫಲಿತಾಂಶ ಶಾಲೆಗಳಿಗೆ ತಲುಪಲಿದ್ದು ಎಲ್ಲ ಮಾಹಿತಿಯೂ ಸಿಗಲಿದೆ, ಕರೊನಾ ಆತಂಕದ ನಡುವೆಯೂ ಜಿಲ್ಲೆಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಿದ್ದು ಕರೊನಾ ಸಮಯದ ಲಾಕ್‌ಡೌನ್ ಅವಧಿಯನ್ನು ಓದಿಗೆ ಬಳಸಿಕೊಂಡ ಜಾಣರು ಇದ್ದಾರೆ.
ರೈತನ ಮಗ 2ನೇ ಟಾಪರ್ !: ತುಮಕೂರು: ಮಗನ ಸಾಧನೆ ಅಪ್ಪ, ಅಮ್ಮನ ಕಣ್ಣುಗಳಲ್ಲಿ ನೀರು ಜಿನುಗಿಸಿತ್ತು. ಕುಣಿಗಲ್ ಪಟ್ಟಣದ ಜ್ಞಾನಭಾರತಿ ಶಾಲೆಯ ಸಾಧಕ ವಿದ್ಯಾರ್ಥಿ ಮಹೇಶ್ ಜಿ.ಎಂ. ತಂದೆ ದ್ವಿತೀಯ ಪಿಯುಸಿ ಮೆಟ್ಟಿಲು ಹತ್ತಿದ್ದರೆ, ತಾಯಿ ಎಸ್ಸೆಸ್ಸೆಲ್ಸಿ ಓದಿದ್ದಾರೆ. ಈ ದಂಪತಿಯ ಪುತ್ರ ರಾಜ್ಯಕ್ಕೆ 2ನೇ ಟಾಪರ್, ಜಿಲ್ಲೆಯ ಮೊದಲ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಕುಣಿಗಲ್ ತಾಲೂಕು ಗುನ್ನಾಗರದ ಕೃಷಿಕ ಜಿ.ವಿ.ಮಾಯಣ್ಣ , ಜಿ.ಆರ್.ಶಶಿಕಲಾ ದಂಪತಿ ಪುತ್ರ ಮಹೇಶ್ ಓದಿನಲ್ಲಿ ಸದಾ ಮುಂದು. ಎಲ್‌ಕೆಜಿಯಿಂದಲೂ ಸ್ಕೂಲ್
ನಲ್ಲಿ ಟಾಪರ್. ಪ್ರತಿನಿತ್ಯ 4-5 ಗಂಟೆ ಓದುತ್ತಿದ್ದ ಮಹೇಶ್‌ಗೆ ಕರೊನಾ ಸಂದರ್ಭದಲ್ಲಿನ ‘ಲಾಕ್‌ಡೌನ್’ನಿಂದ ಪರೀಕ್ಷೆಗೆ ಓದಿಕೊಳ್ಳಲು ಹೆಚ್ಚು ಸಮಯ ಸಿಕ್ಕಿದ್ದರಿಂದ ಅಪೂರ್ವ ಸಾಧನೆಗೆ ಕೈಹಿಡಿಯಿತು. ಕಾಲಹರಣ ಮಾಡದೆ ಸಮಯ ಸದ್ಬಳಕೆ ಮಾಡಿಕೊಂಡ ಪರಿಣಾಮ ನನ್ನ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು ಎನ್ನುವಾಗ ಮಹೇಶ್ ಮಾತುಗಳಲ್ಲಿ ಆತ್ಮವಿಶ್ವಾಸ ಕಾಣಿಸಿತು. 625 ಅಂಕಗಳಿಗೆ 624 ಅಂಕಗಳಿಸಿ ರಾಜ್ಯಕ್ಕೆ 2ನೇ ಟಾಪರ್ ಮಹೇಶ್ ಮನೆಪಾಠಕ್ಕೂ ಹೋಗಿದ್ದ. ತನ್ನೀ ಸಾಧನೆಗೆ ಅಪ್ಪ, ಅಮ್ಮ ಜತೆಗೆ ಶಿಕ್ಷಕರ ಪ್ರೋತ್ಸಾಹ ಸ್ಮರಿಸಲು ಮಹೇಶ್ ಮರೆಯಲಿಲ್ಲ. ಪಿಯುಸಿ ವಿಜ್ಞಾನ ವಿಭಾಗ ಸೇರಲಿರುವ ಮಹೇಶ್, ಇಂಜಿನಿಯರ್ ಅಥವಾ ವೈದ್ಯನಾಗುವ ಯಾವ ಸ್ಪಷ್ಟ ಕನಸೂ ಇಲ್ಲವೆನ್ನುತ್ತಾನೆ.