ಕಲಾದಗಿ: ಗ್ರಾಮದಲ್ಲಿ ಗುರುತಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರಗಳಾದ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಹಾಗೂ ಗುರುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರದಂದು ಕನ್ನಡ ಪರೀಕ್ಷೆ ಸುಸೂತ್ರವಾಗಿ ಜರುಗಿತು.
ಪರೀಕ್ಷಾ ಕೇಂದ್ರದ ಮುಖ್ಯದ್ವಾರಗಳಲ್ಲಿ ಆತಂಕ ಬೇಡ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಆಲ್ ದ ಬೆಸ್ಟ್ ಎಂಬ ಶುಭಹಾರೈಕೆಯ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಬಿಸಿಲಿನ ತಾಪದಿಂದ ವಿದ್ಯಾರ್ಥಿಗಳು ಬಳಲದಿರಲಿ ಎಂದು ಸ್ಥಳೀಯ ಗ್ರಾಪಂನವರು ತಂಪು ಕುಡಿಯುವ ನೀರನ್ನು ಒದಗಿಸಿದ್ದರು. ಆರೋಗ್ಯ ಸಿಬ್ಬಂದಿ ಹಾಗೂ ಹೆಸ್ಕಾಂ ವತಿಯಿಂದ ಪರೀಕ್ಷಾ ಕೇಂದ್ರಗಳಿಗೆ ಲೈನ್‌ಮ್ಯಾನ್ ನಿಯೋಜಿಸಲಾಗಿತ್ತು.
ಇಳಕಲ್ಲ ಡಯಟ್‌ನ ಹಿರಿಯ ಅಧಿಕಾರಿಗಳಾದ ಶೇಖರಪ್ಪ ಬಳಬಟ್ಟಿ, ಪಿ.ಎಸ್.ಚಲವಾದಿ, ರಿಯಾನಾ ಕಂದಗಲ್, ಡಿಡಿಪಿಐ ಕಚೇರಿಯ ಹಿರಿಯ ಅಧಿಕಾರಿಗಳಾದ ಎಚ್.ಜಿ.ಮಿರ್ಜಿ ಹಾಗೂ ಬಾಗಲಕೋಟೆ ತಾಲೂಕು ಪಂಚಾಯಿತಿ ಇಒ ಸುಭಾಷ ಸಂಪಗಾವಿ, ಅಕ್ಷರ ದಾಸೋಹದ ಅಧಿಕಾರಿ ನಾಗರಾಜ ದೇಶಪಾಂಡೆ, ಇಂದಿರಾ ಸುರಪುರ ಅವರು ಗ್ರಾಮದ ಎರಡೂ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಚಂದ್ರಶೇಖರ ಹೆರಕಲ್ ಪರೀಕ್ಷಾ ಕೇಂದ್ರಗಳ ಬಳಿ ಬಂದೋಬಸ್ತ್ ಒದಗಿಸಿದ್ದರು.