ಜಿಲ್ಲೆ

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಕಸರತ್ತು

ಪ್ರಸಿನ್ ಕೆ.ಆರ್

ಸಿ.ಜಿ ಪುನೀತ್ ಚಪ್ಪರದಹಳ್ಳಿ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಗುಣಮಟ್ಟದ ಜತೆ ಹೆಚ್ಚಿನ ಫಲಿತಾಂಶ ತರುವ ನಿಟ್ಟಿನಲ್ಲಿ ವಿಶೇಷ ಕಸರತ್ತು ನಡೆಸುತ್ತಿದೆ.

ಈಗಾಗಲೇ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, ಮಾ.21ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಫೆ.25ರಿಂದ ಮಾ.4ರವರೆಗೆ ಕೊನೆಯ ಹಂತದ ರಾಜ್ಯ ಮಟ್ಟದ ಪೂರ್ವ ಸಿದ್ಧತೆ ಪರೀಕ್ಷೆ ನಡೆಯಲಿದೆ. ತಾಲೂಕಿನಲ್ಲಿ 3058 ಹೊಸ ವಿದ್ಯಾರ್ಥಿಗಳು, 22 ಖಾಸಗಿ, 62 ರಿಪೀಟರ್ಸ್ ಮತ್ತು 3 ಖಾಸಗಿ ರಿಪೀಟರ್ಸ್ ಸೇರಿದಂತೆ ಒಟ್ಟು 3146 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ನಿರಂತರ ಅಭ್ಯಾಸದಿಂದ ಯಶಸ್ಸು ಖಂಡಿತ ಎಂಬ ಧ್ಯೇಯದೊಂದಿಗೆ ಶಿಕ್ಷಣ ಇಲಾಖೆ ತಾಲೂಕಿನ ಎಲ್ಲ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಮಾರ್ಗದರ್ಶನ ನೀಡುವ ಮೂಲಕ ತರಗತಿಗಳನ್ನು ನಡೆಸುತ್ತಿದೆ.

ಕಳೆದ ಐದು ವರ್ಷಗಳಿಂದ ತಾಲೂಕಿನಲ್ಲಿ ಅತಿ ಹೆಚ್ಚು ಫಲಿತಾಂಶ ಕಾಯ್ದಿರಿಸಲು ಇಲಾಖೆ ಸಾಕಷ್ಟು ಶ್ರಮವಹಿಸಿದೆ. ಕಳೆದ ವರ್ಷ ಮಾತ್ರ ಕಡಿಮೆ ಫಲಿತಾಂಶ ದೊರೆತಿದೆ. 2019-20ನೇ ಸಾಲಿನಲ್ಲಿ ಶೇ.87.97, 2020-21ನೇ ಸಾಲಿನಲ್ಲಿ ಶೇ.100, 2021-22ನೇ ಸಾಲಿನಲ್ಲಿ ಶೇ.95.21, 2022-23ನೇ ಸಾಲಿನಲ್ಲಿ ಶೇ.97.59 ಹಾಗೂ 2023-24ನೇ ಸಾಲಿನಲ್ಲಿ ಶೇ.81.03 ಫಲಿತಾಂಶ ಪಡೆದಿದೆ. ಕಳೆದ ವರ್ಷ ಫಲಿತಾಂಶ ಇಳಿಕೆಯಾದ ಪರಿಣಾಮ ಈ ಬಾರಿ ಹೊಸ ಕಾರ್ಯಾಗಾರ, ವಿಶೇಷ ತರಗತಿ ನಡೆಸಲು ಪ್ರಮುಖ ಕಾರಣವಾಗಿದೆ. ಸತತ ಅಭ್ಯಾಸದ ಪ್ರತಿಫಲದಿಂದ ಈ ಬಾರಿ ಶೇ.100 ಫಲಿತಾಂಶ ಗಳಿಸಲು ಪಣತೊಟ್ಟಿದೆ.

ವಿದ್ಯಾರ್ಥಿಗಳ ದತ್ತು: ಉತ್ತಮ ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಹಿತದೃಷ್ಟಿಯಿಂದ ಶಿಕ್ಷಕರಿಗೆ ದತ್ತು ನೀಡಲಾಗುತ್ತಿದೆ. ದತ್ತು ಪಡೆದಂತಹ ಶಿಕ್ಷಕರು ಆ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಶ್ರಮವಹಿಸುವ ಮೂಲಕ, ಅವರ ಅಭ್ಯಾಸದ ಮೇಲೆ ಸದಾ ನಿಗಾ ಇಟ್ಟಿದ್ದಾರೆ. ಇದಲ್ಲದೆ ಮನೆಗಳಿಗೆ ಖುದ್ದು ಭೇಟಿ ನೀಡಿ ಪಾಲಕರೊಂದಿಗೆ ಮಕ್ಕಳ ಕಲಿಕೆ ಬಗ್ಗೆ ಚರ್ಚಿಸುತ್ತಿದ್ದಾರೆ. ಶಾಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಶಾಲಾಭಿವೃದ್ಧಿ ಹಾಗೂ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಬಗ್ಗೆ ಜವಾಬ್ದಾರಿಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ. ತರಗತಿಗೆ ಗೈರು ಹಾಜರಾಗುತ್ತಿರುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಅರಿವು ಮೂಡಿಸಿ ಕ್ರಮತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯ ಆಧಾರದ ಮೇಲೆ ಎ, ಬಿ, ಸಿ ಗುಂಪುಗಳಾಗಿ ವಿಂಗಡಿಸಿ ಸಾಮರ್ಥ್ಯ ಆಧಾರಿತ ಮಾರ್ಗದರ್ಶನ ನೀಡುತ್ತಿದ್ದಾರೆ. ನಿಧಾನಗತಿ ಕಲಿಕೆಯ ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್‌ಗಳನ್ನು ನೀಡಿ ಕಲಿಕಾಂಶಗಳನ್ನು ಸರಳೀಕರಣಗೊಳಿಸಿದ್ದಾರೆ.

ಶಿಕ್ಷಕರಿಂದ ಸ್ಟಡಿ ಹಾಗೂ ವೇಕ್ ಅಪ್ ಕಾಲ್ಸ್: ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಅತಿ ಹೆಚ್ಚು ಮುತುವರ್ಜಿ ತೆಗೆದುಕೊಂಡಿರುವ ಶಿಕ್ಷಕರು ಮನೆಯಲ್ಲಿ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಲಿ ಎಂಬ ನಿಟ್ಟಿನಲ್ಲಿ ರಾತ್ರಿ ವೇಳೆ ಸ್ಟಡಿ ಹಾಗೂ ಬೆಳಗ್ಗೆ ಐದು ಗಂಟೆಗೆ ವೇಕ್‌ಅಪ್ ಕಾಲ್ಸ್ ಎಂಬಂತೆ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 7.30 ರಿಂದ 9.30ರವರೆಗೆ ವಿಶೇಷ ತರಗತಿ ಹಾಗೂ ಸಂಜೆ 4.30 ರಿಂದ 6ಗಂಟೆವರೆಗೆ ಗುಂಪು ಅಧ್ಯಯನ ಮಾಡಿಸಲಾಗುತ್ತಿದೆ. ಇದಲ್ಲದೆ ಈಗಾಗಲೇ ಶಿಕ್ಷಣ ಇಲಾಖೆ ಹಾಗೂ ಉಪನಿರ್ದೇಶಕರ ಕಚೇರಿಯಿಂದ ನೀಡಲಾಗಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಉತ್ತರ ಬರೆಯುವ ಸೂಕ್ತ ವಿಧಾನ ತಿಳಿಸಲಾಗುತ್ತಿದೆ. ಮಕ್ಕಳಲ್ಲಿ ಪರೀಕ್ಷಾ ಭಯ ನಿವಾರಿಸಲು ತೆರೆದ ಪುಸ್ತಕ ಪರೀಕ್ಷೆ, ಮಾದರಿ ಪ್ರಶ್ನೆಪತ್ರಿಕೆಗೆ ಪರೀಕ್ಷೆ ನಡೆಸಲಾಗುತ್ತಿದೆ.

ಈಚ್ ಒನ್ ಟೀಚ್ ಒನ್: ತಾಲೂಕಿನ ಪ್ರತಿಭಾನ್ವಿತ ಹಿರಿಯ ವಿದ್ಯಾರ್ಥಿಗಳಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಸುವುದರ ಮೂಲಕ ಈಚ್ ಒನ್ ಟೀಚ್ ಒನ್ ಎಂಬ ವಿಶೇಷ ಕಾರ್ಯಾಗಾರವನ್ನು ಕೂಡ ನಡೆಸಲಾಗುತ್ತಿದೆ. ಇದರ ಜತೆ ಇಲಾಖೆಯ ಅಧಿಕಾರಿಗಳು ಹಾಗೂ ನುರಿತ ಹಿರಿಯ ಮಾರ್ಗದರ್ಶಕ ಗುರುಗಳಿಂದ ವಿಶೇಷ ಕಲಿಕಾ ತರಗತಿಗಳ ಮೂಲಕ ಮಕ್ಕಳಿಗೆ ಉತ್ತೇಜನ ನೀಡಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒ ಸಭೆ ನಡೆಸುವ ಮೂಲಕ ಮಕ್ಕಳ ಪ್ರಗತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅವರ ಮಾರ್ಗದರ್ಶನದಂತೆ ಈ ಬಾರಿ ಪಠ್ಯ(ಚಾಪ್ಟರ್) ಆಧಾರದ ಮೇಲೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ದಿನಕ್ಕೆ ಎರಡರಿಂದ ಮೂರು ಪಠ್ಯಗಳ ಅನುಗುಣವಾಗಿ ಟೆಸ್ಟ್ ಮಾಡಿಸಿ ಮಕ್ಕಳಿಗೆ ಹೆಚ್ಚಿನ ಜ್ಞಾನ ತುಂಬಲಾಗುತ್ತಿದೆ.

ಶಾಲಾ ಹಂತದಲ್ಲಿ ಇಷ್ಟು ಕಾರ್ಯಾಗಾರಗಳು ನಡೆದರೆ, ತಾಲೂಕು ಮಟ್ಟದಲ್ಲಿ ನಿರಂತರವಾಗಿ ಮುಖ್ಯಶಿಕ್ಷಕರ ಸಭೆ, ಕಲಿಕೆಗಳ ಪರಿಶೀಲನೆ, ತಾಲೂಕು ವಿಷಯವಾರು ತಂಡಗಳ ರಚನೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ಇದರ ಜತೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸುವಂತೆ ಇಲಾಖೆ ಶಿಕ್ಷಕರಿಗೆ ಸೂಚಿಸಿದೆ.

ಪಿರಿಯಾಪಟ್ಟಣ ತಾಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಶಾಲೆ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ ಒಟ್ಟು ಐವತ್ತು ಪ್ರೌಢಶಾಲೆಗಳು ಇವೆ. ಪರೀಕ್ಷೆ ಹಿನ್ನಲೆ ಪ್ರತಿ ಶಾಲೆಯ ಮೇಲ್ವಿಚಾರಣೆಯನ್ನು ತೆಗೆದುಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ನುರಿತ ತಂಡಗಳು, ಪರೀಕ್ಷೆ ನೋಡಲ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹೆಜ್ಜೆ ಹೆಜ್ಜೆಯಲ್ಲಿಯೂ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇನ್ನುಬಿಇಒರಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಸೇರಿದಂತೆ ಮೇಲಧಿಕಾರಿಗಳು ಹಂತ ಹಂತದ ಮಾಹಿತಿ ಪಡೆಯುತ್ತಿದ್ದಾರೆ.