ಜಿಲ್ಲೆ

27ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

Tumakuru

ತುಮಕೂರು: ಮಾ.27ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆಗಳು ಯಾವುದೇ ಲೋಪವಿಲ್ಲದೆ ಪಾರದರ್ಶಕವಾಗಿ ನಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಟೇಬಲ್, ಕುಡಿಯುವ ನೀರು ಮತ್ತು ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಬೇಕು, ಅಲ್ಲದೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಾಗಲಿ, ಪರೀಕ್ಷಾ ಕೇಂದ್ರಗಳಲ್ಲಿ ಗುಂಪು ಸೇರದಂತೆ ನೋಡಿಕೊಳ್ಳುವುದು ಬಿಇಒ ಜವಾಬ್ದಾರಿ ಎಂದರು.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವಾಗ, ಉತ್ತರ ಪತ್ರಿಕೆಗಳನ್ನು ತರುವಾಗ ಪೊಲೀಸ್ ಇಲಾಖೆ ಭದ್ರತೆ ನೀಡಬೇಕು. ಅಲ್ಲದೇ ಪರೀಕ್ಷಾ ಕಾರ್ಯಕ್ಕಾಗಿ ಸೂಕ್ತ ವಾಹನಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜರ್ಸ್‌ ಇಟ್ಟು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಎಲ್ಲ ಅಧಿಕಾರಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಪರೀಕ್ಷೆ ಕೊಠಡಿಗೆ ತೆರಳುವಂತೆ

ವ್ಯವಸ್ಥೆ ಮಾಡಬೇಕು ಎಂದರು.

ವಿದ್ಯಾರ್ಥಿಯು ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದರೆ ಅಂತಹವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು, ಕೋವಿಡ್-19 ವ್ಯಾಪಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಗೊಳಿಸಿ ವಿದ್ಯಾರ್ಥಿಗಳ

ಅಂತರವನ್ನು ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಉಪವಿಭಾಗಾಧಿಕಾರಿ ಅಜಯ್, ಡಿಡಿಪಿಐಗಳಾದ ಎಂ.ಆರ್.ಕಾಮಾಕ್ಷಿ, ರೇವಣಸಿದ್ಧಪ್ಪ, ಡಯಟ್ ಪ್ರಿನ್ಸಿಪಾಲ್ ಮಂಜುನಾಥ್ ಮತ್ತಿತರರು ಇದ್ದರು.