ಜಿಲ್ಲೆ

ದ.ಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಮೊದಲ ಮೂರು ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದಲೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆಯುತ್ತಿದ್ದಾರೆ. ಹಾಜರಾದ ಎಲ್ಲರೂ ಉತ್ತೀರ್ಣರಾಗುವುದರಿಂದ ವಿದ್ಯಾರ್ಥಿಗಳೆಲ್ಲ ತುಸು ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಆದರೆ ಮೂರು ಪರೀಕ್ಷೆಗಳನ್ನು ಏಕಕಾಲದಲ್ಲಿ ಬರೆಯಬೇಕಾಗಿರುವುದರಿಂದ ಕೆಲವರು ಆತಂಕದಲ್ಲಿದ್ದಂತೆ ಕಂಡು ಬಂದರು.

ನಗರ ಭಾಗದಲ್ಲಿ ಬಹುತೇಕ ವಿದ್ಯಾರ್ಥಿಗಳನ್ನು ಹೆತ್ತವರೇ ಪರೀಕ್ಷಾ ಕೇಂದ್ರಗಳಿಗೆ‌ ಕರೆ ತಂದು ಬಿಟ್ಟಿದ್ದಾರೆ. ವಿದ್ಯಾರ್ಥಿಗಳನ್ನು ಸ್ಯಾನಿಟೈಸ್ ಮಾಡಿ, ತಾಪಮಾನ ಪರೀಕ್ಷೆ ಮಾಡಿ ಕೊಠಡಿಗೆ ಕಳುಹಿಸಲಾಯಿತು. ಶಿಕ್ಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪರೀಕ್ಷಾರ್ಥಿಗಳಿಗೆ ಸಹಕರಿಸಿದರು. ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್‌ ಜಾರಿ ಮಾಡಲಾಗಿದ್ದು, ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ 9 ಮಂದಿ ಕರೊನಾ ಸೋಂಕಿತರೂ ಸೇರಿದಂತೆ ಒಟ್ಟು 32,636 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. 179 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ ಭಾನುವಾರವೇ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿತ್ತು.