ಮಂಡ್ಯ: ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ನಮ್ಮ ಪರಿಶ್ರಮ, ಪ್ರಯತ್ನಕ್ಕೆ ಫಲ ದೊರೆತಿದೆ. ಈ ವರ್ಷ ಮೊದಲ ಸ್ಥಾನ ನಿರೀಕ್ಷೆ ಮಾಡಿದ್ದೆವು. ಆದರೆ 2ನೇ ಸ್ಥಾನ ಬಂದಿದೆ. ಮುಂದಿನ ವರ್ಷ ಖಂಡಿತಾ ಮೊದಲ ಸ್ಥಾನಕ್ಕೇರುತ್ತೇವೆ ಎಂದು ಡಿಡಿಪಿಐ ಎಸ್.ಟಿ. ಜವರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಸ್ಥಾನ ಪಡೆದಿರುವವರಿಗೂ ನಮಗೂ ಅಂತರ ಬಹಳ ಕಡಿಮೆ. ಮುಂದಿನ ವರ್ಷ ಮೊದಲ ಸ್ಥಾನಕ್ಕೆ ಬರಬೇಕಿದೆ. ಅದಕ್ಕಾಗಿ ಈ ಬಾರಿಯ ಶೈಕ್ಷಣಿಕ ವರ್ಷದ ಆರಂಭದಿಂದಲೇ ರೂಪುರೇಷೆ ಸಿದ್ಧಪಡಿಸಿಕೊಂಡು ಅದರಂತೆ ಪ್ರಯತ್ನ ಮಾಡಲಾಗುವುದು. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಮೇಲ್ವಿಚಾರಣೆ, ಮಾರ್ಗದರ್ಶನದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಬಹಳ ಶ್ರಮವಹಿಸಿದ್ದರು. ಮಕ್ಕಳೂ ಕಠಿಣ ಅಭ್ಯಾಸ ಮಾಡಿದ್ದರು. ಚೆನ್ನಾಗಿ ಓದಿ ಉತ್ತಮ ಅಂಕ ಗಳಿಕೆಯೊಂದಿಗೆ ಜಿಲ್ಲೆಯ ಗೌರವ, ಪ್ರತಿಷ್ಠೆಯನ್ನು ಎತ್ತಿ ಹಿಡಿದಿದ್ದಾರೆ. ಇದಕ್ಕಾಗಿ ಶಿಕ್ಷಕರು, ಮಕ್ಕಳನ್ನು ಅಭಿನಂದಿಸುತ್ತೇನೆ ಎಂದರು.
ಫಲಿತಾಂಶ ಸುಧಾರಣೆ ಸಂಬಂಧ ಪ್ರತಿ 15 ದಿನಗಳಿಗೊಮ್ಮೆ ಜಿಪಂ ಸಿಇಒ ಸಭೆ ನಡೆಸುತ್ತಿದ್ದರು. ಜಿಲ್ಲಾ ಹಂತದಲ್ಲಿ ಕ್ರಿಯಾಯೋಜನೆ ತಯಾರಿಸುವುದರ ಜತೆಗೆ 6 ವಿಷಯಗಳಿಗೂ ಸಂಬಂಧಿಸಿದ ಕಾರ್ಯಾಗಾರ ನಡೆಸಲಾಗಿತ್ತು. ಪ್ರತಿ ಘಟಕವಾರು ಯೂನಿಟ್ ಟೆಸ್ಟ್‌ಗಳನ್ನು ಮಾಡಲಾಗಿದೆ. ಗುಂಪು ಅಧ್ಯಯನ, ಮೌಲ್ಯಮಾಪನಾ ಚಟುವಟಿಕೆಗಳು, ವಿಭಾಗದ ಮಟ್ಟದ ಮುಖ್ಯ ಶಿಕ್ಷಕರ ಕಾರ್ಯಾಗಾರ, ಮಕ್ಕಳ ದತ್ತು ಪಡೆಯುವಿಕೆ, ಪಾಲಕರ ಸಭೆ, ಮಕ್ಕಳ ಪರೀಕ್ಷಾ ಭಯ ನಿವಾರಣಾ ಕಾರ್ಯಾಗಾರಗಳನ್ನು ನಡೆಸಲಾಗಿತ್ತು ಎಂದು ವಿವರಿಸಿದರು.